ADVERTISEMENT

ಸರಳವಾಗಿ ನಡೆದ ಶರಣರ ಮೆರವಣಿಗೆ

ಸ್ತಬ್ಧಚಿತ್ರ, ಕಲಾಮೇಳದ ವೈಭವವಿಲ್ಲ, ಕಾಣಿಕೆ ನೀಡಿ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:06 IST
Last Updated 27 ಅಕ್ಟೋಬರ್ 2020, 4:06 IST
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಭರಮಣ್ಣ ನಾಯಕ ಅವರ ಭಾವಚಿತ್ರಕ್ಕೆ ಸೋಮವಾರ ಪುಷ್ಪನಮನ ಸಲ್ಲಿಸಿದರು
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಭರಮಣ್ಣ ನಾಯಕ ಅವರ ಭಾವಚಿತ್ರಕ್ಕೆ ಸೋಮವಾರ ಪುಷ್ಪನಮನ ಸಲ್ಲಿಸಿದರು   

ಚಿತ್ರದುರ್ಗ: ವಿಜಯದಶಮಿಯ ದಿನ ಕಳೆಗಟ್ಟುತ್ತಿದ್ದ ಕೋಟೆನಗರಿಯಲ್ಲಿ ಸೋಮವಾರ ನಿರಾಡಂಬರವಿತ್ತು. ಸಾಂಸ್ಕೃತಿಕ ಕಲಾ ತಂಡಗಳ ವೈಭವ ಕಾಣಲಿಲ್ಲ. ವಾದ್ಯ ಮೇಳಗಳ ಸಂಗೀತ ಕಿವಿಗೆ ಬೀಳಲಿಲ್ಲ. ಆಡಂಬರದ ರೂಪ ಪಡೆಯುತ್ತಿದ್ದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೆರವಣಿಗೆ ಕೊರೊನಾ ಸೋಂಕಿನ ಕಾರಣಕ್ಕೆ ಸರಳವಾಗಿ ನೆರವೇರಿತು.

ಶರಣ ಸಂಸ್ಕೃತಿ ಉತ್ಸವದ ವಿಜಯದಶಮಿಯ ದಿನ ಶಿವಮೂರ್ತಿ ಮುರುಘಾ ಶರಣರ ಮೆರವಣಿಗೆ ನಡೆಯುವುದು ವಾಡಿಕೆ. ಕೋಟೆ ನಗರಿಯ ರಾಜಬೀದಿಯಲ್ಲಿ ಶರಣರು ಸಾರೋಟಿನಲ್ಲಿ ಸಾಗುತ್ತಿದ್ದರೆ ಆಗಸದಿಂದ ಪುಷ್ಪವೃಷ್ಟಿ ಸುರಿಯುತ್ತಿತ್ತು. ಹೆಲಿಕಾಪ್ಟರ್‌ ಸುರಿಸುವ ಪುಷ್ಪದ ಮಳೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಇಂತಹ ದೃಶ್ಯಗಳು ಸೋಮವಾರ ಕಾಣಲಿಲ್ಲ.

ಸಾಂಪ್ರದಾಯಿಕ ವಿಧಿ–ವಿಧಾನ ಪೂರೈಸುವ ಉದ್ದೇಶದಿಂದ ಆಚರಿಸುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಹಲವು ಬದಲಾವಣೆಗಳಾಗಿವೆ. ಅದ್ಧೂರಿಯಾಗಿ ನಡೆಯುತ್ತಿದ್ದ ಮೆರವಣಿಗೆ ಸರಳ ರೂಪ ಪಡೆಯಿತು. ಶರಣರು ಸಾರೋಟಿನ ಬದಲು ಕಾರು ಏರಿದರು. ದಿನವಿಡೀ ನಡೆಯುತ್ತಿದ್ದ ಮರವಣಿಗೆ ಅರ್ಧ ಗಂಟೆಯಲ್ಲಿ ಮುಕ್ತಾಯವಾಯಿತು.

ADVERTISEMENT

ಮುರುಘಾ ಮಠದ ಮಧ್ಯಾಹ್ನದ ಪ್ರಸಾದ ಮುಗಿದ ಬಳಿಕ ಮೆರವಣಿಗೆಗೆ ತಯಾರಿ ನಡೆದವು. ಮಧ್ಯಾಹ್ನ 3.15ಕ್ಕೆ ಶಿವಮೂರ್ತಿ ಮುರುಘಾ ಶರಣರು ಕಾರು ಏರಿದರು. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮುಮ್ಮಡಿ ಶಿವರುದ್ರ ಸ್ವಾಮೀಜಿ ಜೊತೆಯಾದರು. ಶರಣರ ವಾಹನವನ್ನು ಭಕ್ತರು ಹಾಗೂ ಮಠದ ಅನೇಕರು ಹಿಂಬಾಲಿಸಿದರು. ಪೊಲೀಸ್‌ ಹಾಗೂ ಆಂಬುಲೆನ್ಸ್‌ ವಾಹನ ಕೂಡ ಜತೆಗೆ ಸಾಗಿದವು.

ಕೋವಿಡ್‌ ಕಾರಣಕ್ಕೆ ಭಕ್ತರು ಮೆರವಣಿಗೆ ಮಾರ್ಗದಲ್ಲಿ ಜಮಾಯಿಸದಂತೆ ಮೊದಲೇ ಸೂಚನೆ ನೀಡಲಾಗಿತ್ತು. ಹೂಹಾರ, ಹೂಗುಚ್ಛ ನೀಡದಂತೆ ಎಚ್ಚರಿಸಲಾಗಿತ್ತು. ಮೆರವಣಿಗೆಯ ಮಾರ್ಗದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಲಿಲ್ಲ. ಪ್ರಮುಖ ವೃತ್ತದಲ್ಲಿ ಮಾತ್ರ ಭಕ್ತರು ಸೇರಿ ಶರಣರ ಮೆರವಣಿಗೆಗೆ ಕಾಯುತ್ತಿದ್ದರು. ಮಠದ ಹೊರಭಾಗದಲ್ಲಿ ಮಠದ ಕುರುಬರಹಟ್ಟಿ ಗ್ರಾಮಸ್ಥರು ಭಕ್ತಿ ಸಮರ್ಪಣೆ ಮಾಡಿದರು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟಿ ನಗರ ಪ್ರವೇಶಿಸುತ್ತಿದ್ದಂತೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಶರಣರನ್ನು ಭೇಟಿಯಾಗಿ ಭಕ್ತಿ ಸಮರ್ಪಣೆ ಮಾಡಿದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಆನೆ ಬಾಗಿಲು, ಉಚ್ಚಂಗಿ ಎಲ್ಲಮ್ಮ ದೇವಾಲಯ ಸೇರಿದಂತೆ ಹಲವೆಡೆ ಶರಣರಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು. ಶರಣರಿಗೆ ಅರ್ಪಿಸಲು ತಂದಿದ್ದ ಹಣ್ಣನ್ನು ಭಕ್ತರಿಗೆ ಮರಳಿಸಲಾಯಿತು. ಅನೇಕರು ಕಾಣಿಕೆ ನೀಡಿ ಭಕ್ತಿಯಿಂದ ನಮಿಸಿದರು.

ಗಾಂಧಿ ವೃತ್ತದಿಂದ ಬಿ.ಡಿ.ರಸ್ತೆ, ಅಂಬೇಡ್ಕರ್ ವೃತ್ತ, ರಂಗಯ್ಯನಬಾಗಿಲು ಮೂಲಕ ಕೋಟೆಗೆ ತೆರಳುತ್ತಿದ್ದ ಮೆರವಣಿಗೆ ಮಾರ್ಗ ಸೋಮವಾರ ಬೆಳಿಗ್ಗೆ ಬದಲಾಯಿತು. ಗಾಂಧಿ ವೃತ್ತದಿಂದ ಆನೆಬಾಗಿಲು, ಉಚ್ಚಂಗಿ ಎಲ್ಲಮ್ಮ ದೇಗುಲದ ಮೂಲಕ ಕೋಟೆಯನ್ನು ತಲುಪಿತು.

ಮೆರವಣಿಗೆಯಲ್ಲಿ ಸ್ತಬ್ಧಚಿತ್ರ, ಕಲಾ ಮೇಳಗಳು ಕಾಣಲಿಲ್ಲ. ಮೆರವಣಿಗೆ ಸಾಗುವ ಮಾರ್ಗವನ್ನು ಭಕ್ತರು ಶುಚಿಗೊಳಿಸಿ ನೀರು ಹಾಕಿದ್ದರು. ರಸ್ತೆಯ ಅಲ್ಲಲ್ಲಿ ರಂಗೋಲಿಗಳು ಅರಳಿದ್ದವು. ವಾಹನದಲ್ಲಿ ಸಾಗುತ್ತಿದ್ದ ಶರಣರನ್ನು ಭಕ್ತರು ರಸ್ತೆ ಬದಿಯಲ್ಲಿ ನಿಂತು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.