ಚಿತ್ರದುರ್ಗ: ‘ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಗುರುಪರಂಪರೆಯ 7ನೇ ಪೀಠಾಧಿಪತಿಯಾಗಿದ್ದ ಮೂರುಸಾವಿರದ ಸಿದ್ದಲಿಂಗ ಶ್ರೀಗಳು ಧರ್ಮಶಕ್ತಿ, ತತ್ವಬೋಧನೆ ಮತ್ತು ಸಮಾಜಶುದ್ಧಿಗಾಗಿ ತಮ್ಮ ಬದುಕು ಸಮರ್ಪಣೆ ಮಾಡಿಕೊಂಡಿದ್ದರು. ವಾಮಾಚಾರದ ವಿರುದ್ಧ ಸಮಾಜವನ್ನು ಜಾಗೃತಗೊಳಿಸಿದ್ದರು’ ಎಂದು ಎಸ್‌ಜೆಎಂ ಪದವಿ ಕಾಲೇಜಿನ ಅಧ್ಯಾಪಕ ಸಿ.ಎಂ.ವಿಶ್ವನಾಥ್ ಹೇಳಿದರು.
ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಸನ್ನಿಧಾನದಲ್ಲಿ ಶನಿವಾರ ನಡೆದ ಮೂರುಸಾವಿರದ ಸಿದ್ದಲಿಂಗ ಶ್ರೀಗಳ ವ್ಯಕ್ತಿತ್ವದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
‘ಸಿದ್ದಲಿಂಗ ಶ್ರೀಗಳು 1778ರಿಂದ 1790ರ ವರೆಗೆ ಶೂನ್ಯಪೀಠವನ್ನು ಆಳಿದ ಧೈರ್ಯವಂತ ಗುರುವಾಗಿದ್ದರು. ಅವರು ಧೀರತೆ, ಉದಾರತೆ, ಕರುಣೆ, ಮತ್ತು ತತ್ವಜ್ಞಾನದಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಭಕ್ತರು ಮತ್ತು ಮಾಹೇಶ್ವರರ ನಡುವಿನ ಗೊಂದಲಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಆ ಕಾಲ ಅಧ್ಯಾತ್ಮದ ಗೊಂದಲಗಳ ಕಾಲಘಟ್ಟವಾಗಿತ್ತು. ಎಲ್ಲಾ ಸಮಸ್ಯೆಗಳಿಗೂ ಸಿದ್ದಲಿಂಗ ಸ್ವಾಮೀಜಿ ಉತ್ತರ ನೀಡುತ್ತಿದ್ದರು’ ಎಂದರು.
‘ವಾಮಾಚಾರದ ಆಚರಣೆಗಳ ವಿರುದ್ಧ ಅವರು ಧ್ವನಿ ಎತ್ತಿದ್ದರು. ದಾರಿ ತಪ್ಪಿದ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಮಾತುಗಳು ಕೂಡ ಭಕ್ತರ ಮನಸ್ಸನ್ನು ಶುದ್ಧಗೊಳಿಸುತ್ತಿದ್ದವು. ಮಹಾಸ್ವಾಮಿಗಳ ಅಂತಿಮಘಟ್ಟದಲ್ಲಿ ಅವರು ಮಾಗಡಿಗೆ ಹೋದರು. ಅಲ್ಲಿ ಲಿಂಗಾನುಸಂಧಾನ ಮಾಡುತ್ತಾ ಶುದ್ಧಚಿತ್ತದಿಂದ ಜೀವಿಸಿ, ಅಲ್ಲಿಯೇ ಬಯಲಾದರು’ ಎಂದರು.
‘ಅವರ ಬದುಕು ಒಂದು ದೀಪವಾಗಿ ಬೆಳಕಿತು. ಅನೇಕ ಭಕ್ತರ ಬಾಳಿಗೆ ಬೆಳಕು ತೋರಿಸಿತು. ವಾಮಾಚಾರಕ್ಕೆ ಶುದ್ಧಾಚಾರವೇ ಪರಿಹಾರ ಎಂದು ಹೇಳುತ್ತಿದ್ದರು. ಈ ಸೂತ್ರವನ್ನು ತಮ್ಮ ಜೀವನದಿಂದ ನೈಜವಾಗಿ ತೋರಿಸಿದವರು ಮೂರುಸಾವಿರದ ಸಿದ್ದಲಿಂಗ ಸ್ವಾಮೀಜಿ ಸಮಾಜಕ್ಕೆ ದಾರಿ ತೋರುವ ಕೆಲಸ ಮಾಡಿದರು’ ಎಂದರು.
ಸಮಾರಂಭದ ಸಮ್ಮುಖ ವಹಿಸಿದ್ಧ ಮುರುಘೇಂದ್ರ ಸ್ವಾಮೀಜಿ ಮಾತನಾಡಿ ‘ಚಿನ್ಮೂಲಾದ್ರಿ ಸುಕ್ಷೇತ್ರ ಮುರುಘಾಮಠದ ಪೀಠಾಧಿಪತಿಗಳಾಗಿದ್ದ ಮೂರುಸಾವಿರದ ಸಿದ್ಧಲಿಂಗ ಸ್ವಾಮಿಗಳು ಅವರ ಕಾಲದಲ್ಲಿ ಗುರುಪೀಠ, ವಿರಕ್ತಪೀಠ, ಶೂನ್ಯಪೀಠ, ನ್ಯಾಯಪೀಠವೂ ಆಗಿ ಕಾರ್ಯನಿರ್ವಹಿಸಿದ್ದಾರೆ. ನ್ಯಾಯಾಲಯಗಳಿಲ್ಲದ ಕಾಲದಲ್ಲಿ ಅನೇಕ ವ್ಯಾಜ್ಯಗಳನ್ನು ಬಗೆಹರಿಸಿದ ಕೀರ್ತಿ ಸಿದ್ಧಲಿಂಗ ಸ್ವಾಮೀಜಿಗೆ ಸಲ್ಲುತ್ತದೆ’ ಎಂಧರು.
‘ಗುರುಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವೇಕ ಮತ್ತು ವೈರಾಗ್ಯ ಬಂದಿತ್ತು. ಲೋಕದ ವ್ಯವಹಾರ, ಸಂಪತ್ತು, ಅಧಿಕಾರದ ವ್ಯಾಮೋಹ ಅವರಿಗೆ ಇತರಲಿಲ್ಲ. ನಿರ್ಮೋಹಿಯಾಗಿದ್ದ ಶ್ರೀಗಳವರು ಚಿನ್ಮಯಮೂರ್ತಿಯಾಗಿ, ಜ್ಯೋತಿಯಾಗಿ ಈ ಸಮಾಜಕ್ಕೆ ಬೆಳಕನ್ನು ನೀಡಿ ಬಯಲಾದರು’ ಎಂದರು.
ಸಾನ್ನಿಧ್ಯ ವಹಿಸಿದ್ದ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರ ಬಸವ ಕುಮಾರ ಸ್ವಾಮೀಜಿ ಮಾತನಾಡಿ ‘ಸಿದ್ದಲಿಂಗ ಸ್ವಾಮಿಗಳ ಕಾಲಕ್ಕೂ ಸಮಾಜದಲ್ಲಿ ಪರಸ್ಪರ ತಿಕ್ಕಾಟ, ವೈಷಮ್ಯ, ಜಾತಿ ಕಲಹದಂತಹ ಸಮಸ್ಯೆಗಳಿದ್ದವು. ಅವುಗಳನ್ನು ಸಮಚಿತ್ತದಿಂದ ಬಗೆಹರಿಸುವ ಹೊಣೆಗಾರಿಕೆಯನ್ನು ಶ್ರೀಗಳು ಮಾಡಿದ್ದರು. ದಾರಿ ತಪ್ಪಿ ನಡೆಯುತ್ತಿದ್ದವರಿಗೆ ಬುದ್ಧಿ ಹೇಳುತ್ತ ಸಮಾಜವನ್ನು ಶುದ್ಧೀಕರಿಸುತ್ತಾ ನಾಡಿನ ಬೆಳವಣಿಗೆಗೆ ಕಾರಣರಾಗಿದ್ದರು’ ಎಂದರು.
ಸೇವಾಕರ್ತಾರಾದ ಗಂಗಾಂಭಿಕಾ, ಶಂಕರ್, ವೀರಭದ್ರಪ್ಪ, ಚಲ್ಮೇಶ್, ನಾಗನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.