ಚಿತ್ರದುರ್ಗ: ಅನ್ನ ದಾಸೋಹವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅನ್ನದಾನವು ಕೇವಲ ಆಹಾರ ದಾನ ಮಾಡುವುದಲ್ಲ, ಅದು ಕರುಣೆ, ಸಹಾನುಭೂತಿ ಮತ್ತು ಸಮಾಜ ಸೇವೆಯ ಸಂಕೇತವಾಗಿದೆ’ ಎಂದು ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಭಾರತೀಯ ರೈಲ್ವೆ ಬೋರ್ಡಿನ ಮಾಜಿ ಸದಸ್ಯ ಕೆ.ವಿ.ಸಿದ್ಧರಾಜು ಅವರಿಂದ ನಗರದ ಹೊರವಲಯದಲ್ಲಿರುವ ಎಸ್‌ಜೆಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಅನ್ನದಾಸೋಹ ನೆರವೇರಿಸಿದರು.
‘ಒಂದು ತುತ್ತು ಅನ್ನಕ್ಕೆ ಪರದಾಡುವ ಜನರಿಗೆ ಅನ್ನವೇ ದೇವರು ಆಗಿರುತ್ತದೆ. ಅನ್ನವೇ ಬದುಕಾಗಿರುತ್ತದೆ. ಅನ್ನವಿಲ್ಲದೇ ಈ ಜಗತ್ತಿನಲ್ಲಿ ಹಲವಾರು ಜನ ಪರದಾಡುತ್ತಾರೆ. ಈ ರೀತಿಯ ಬದುಕನ್ನು ಕಂಡವರು ಒಪ್ಪತ್ತಿನ ಗಂಜಿಗೂ ಅಲೆದಾಟ ನಡೆಸಿದ್ದಾರೆ. ಆಹಾರಕ್ಕಾಗಿ ಬದುಕಿನ ಹೋರಾಟ ಪ್ರಾರಂಭಿಸಿದ್ದಾರೆ. ಇಂದು ತಾವು ಉಂಟು ಬಡವರ ಹಸಿವನ್ನು ನೀಗಿಸುವ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.
‘ನಾವು ತಿನ್ನುವ ಅನ್ನದ ಒಂದೊಂದು ಅಗುಳಿನ ಮೇಲೂ ಅದನ್ನು ತಿನ್ನುವವರ ಹೆಸರು ಇರುತ್ತದೆ ಎನ್ನುವ ಮಾತು ಸಾಮಾನ್ಯವಾಗಿದೆ. ಅಕ್ಕಿ ಉಳಿದರೆ ನಾಳೆ ಅನ್ನ ಮಾಡಬಹುದು. ಅನ್ನ ಮಾಡಿ ತಿಂದು ಉಳಿದರೆ ನಂತರ ಅದನ್ನು ಬಿಸಾಕಬೇಕೇ ಹೊರತು ಅದು ನಾಳೆಗೆ ಹಾಳಾಗುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟೇ ಅಕ್ಕಿಯನ್ನು ಬಳಸಿ ಅನ್ನವನ್ನಾಗಿ ಪರಿವರ್ತಿಸಬೇಕು. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ. ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದರು.
ಶಾಂತರಾಮು, ನಾಗರಾಜು, ಚಂದ್ರಶೇಖರ, ಗೆರಗುಂಟೆಪಾಳ್ಯ ಸಿದ್ಧರಾಜು, ರಾಘವೇಂದ್ರ, ಗೀತಾ ಸಿದ್ಧರಾಜು, ಶ್ರೀಧರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.