ADVERTISEMENT

ಹಿರಿಯೂರು: ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮ

ವದ್ದೀಗೆರೆ: ಐತಿಹಾಸಿಕ ಪ್ರಸಿದ್ಧ ದೇವಾಲಯದಲ್ಲಿ ಉತ್ಸವ ನಾಳೆ

ಸುವರ್ಣಾ ಬಸವರಾಜ್
Published 2 ಏಪ್ರಿಲ್ 2023, 5:57 IST
Last Updated 2 ಏಪ್ರಿಲ್ 2023, 5:57 IST
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮದಲ್ಲಿರುವ ಸಿದ್ದೇಶ್ವರಸ್ವಾಮಿಯ ವಿಗ್ರಹ (ಎಡಚಿತ್ರ) ವರ್ಷದ 364 ದಿನವೂ ನೀರು ಇದ್ದು, ಜಾತ್ರೆ ದಿನ ಬತ್ತುವ ದೇಗುಲದ ಸಮೀಪದ ತೆರೆದಬಾವಿ
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮದಲ್ಲಿರುವ ಸಿದ್ದೇಶ್ವರಸ್ವಾಮಿಯ ವಿಗ್ರಹ (ಎಡಚಿತ್ರ) ವರ್ಷದ 364 ದಿನವೂ ನೀರು ಇದ್ದು, ಜಾತ್ರೆ ದಿನ ಬತ್ತುವ ದೇಗುಲದ ಸಮೀಪದ ತೆರೆದಬಾವಿ   

ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಗೆರೆ ಗ್ರಾಮದಲ್ಲಿ ಕಾಲ ಭೈರವೇಶ್ವರ ಸ್ವಾಮಿ (ಸಿದ್ಧೇಶ್ವರ ಸ್ವಾಮಿ) ಬ್ರಹ್ಮರಥೋತ್ಸವ ಏಪ್ರಿಲ್‌ 3ರಂದು ಸಂಜೆ 4.30ಕ್ಕೆ ನಡೆಯಲಿದೆ.

ಭವರೋಗ ವೈದ್ಯ, ಭಕ್ತರ ಕೋರಿಕೆಯನ್ನು ಸ್ಥಳದಲ್ಲಿಯೇ ನೆರವೇರಿಸುವ ದೈವ ಎಂದೇ ಖ್ಯಾತಿಯ ದೇವಾಲಯ ಇದೆ.

ಇತಿಹಾಸ: ಸಿದ್ಧರು–ಸಾಧಕರ ನೆಲೆವೀಡು ಎಂದು ಖ್ಯಾತಿ ಪಡೆದಿರುವ ವದ್ದೀಗೆರೆ ಗ್ರಾಮ ಹಿರಿಯೂರಿನಿಂದ 28 ಕಿ.ಮೀ. ದೂರದಲ್ಲಿದೆ. ‘ವದ್ದೀಗೆರೆ ಸಿದ್ದಪ್ಪ’ ಎಂದು ಖ್ಯಾತಿ ಪಡೆದಿರುವ ಸಿದ್ದಪ್ಪನ ಮಹಿಮೆಯನ್ನು, ಆತ ಹೇಮಾವತಿಯಿಂದ ಇಲ್ಲಿಗೆ ಬಂದಿರುವುದನ್ನು ಜಾನಪದ ಹಾಡುಗಳ ರೂಪದಲ್ಲಿ ಬಣ್ಣಿಸಿರುವುದನ್ನು ಹಲವು ಜಾನಪದ ಸಂಶೋಧಕರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ.

ADVERTISEMENT

ಜನಪದ ಕತೆ: ವದ್ದೀಗೆರೆಗೆ ಎರಡು ಮೈಲಿ ದೂರದಲ್ಲಿದ್ದ ‘ನೊಣಬಿ’ ಎಂಬ ಪಟ್ಟಣವನ್ನು ಏಳು ಮಂದಿ ಗೌಡರು ಆಳುತ್ತಿದ್ದರು. ಅವರಿಗೆ ಸಂತಾನವಿಲ್ಲದ ಕಾರಣ ಕಿರಿಯವನಾದ ಮಲ್ಲೇಗೌಡ ಆಂಧ್ರಪ್ರದೇಶದ ಹೇಮಾವತಿಯ ಯಂಜಾರು ಸಿದ್ಧೇಶ್ವರ (ಯಂಜಾರಪ್ಪ)ನ ದರ್ಶನಕ್ಕೆ ಹೋದಾಗ ಅಲ್ಲಿ ಅನಾಥ ಮಗುವೊಂದು ಸಿಗುತ್ತದೆ. ಅದನ್ನು ಜನ ಪರದೇಸಿ ನಿಂಗಣ್ಣ ಎನ್ನುತ್ತಿದ್ದರು. ಗೌಡನಿಗೆ ಸಂತಾನವಾದರೆ ಹುಟ್ಟುವ ಹೆಣ್ಣು ಮಗುವನ್ನು ನಿಂಗಣ್ಣನಿಗೆ ಕೊಡುವಂತೆ ಯಂಜಾರಪ್ಪನ
ಅಪ್ಪಣೆಯಾಗುತ್ತದೆ.

ಪರದೇಸಿ ನಿಂಗಣ್ಣನೊಂದಿಗೆ ಊರಿಗೆ ಬಂದ ನಂತರ ಗೌಡನಿಗೆ 7 ಹೆಣ್ಣುಮಕ್ಕಳು ಜನಿಸುತ್ತಾರೆ. ಪರದೇಸಿಗೆ ಹೆಣ್ಣು ಕೊಡುವುದು ಹೇಗೆ ಎಂದು ಚಿಂತಿಸಿದ ಗೌಡ ನಿಂಗಣ್ಣನನ್ನು ಮನೆಯಿಂದ ಹೊರಹಾಕಲು ಸಂಚು ರೂಪಿಸುತ್ತಾನೆ. ಒಂದೇ ದಿನದಲ್ಲಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಜಾಲಿ ಗಿಡ ಕಡಿಯಲು ಹೇಳುತ್ತಾನೆ. ಆಳುಗಳ ನೆರವಿಲ್ಲದೆ ಬೀಳು ನೆಲದಲ್ಲಿ ಒಂದೇ ದಿನದಲ್ಲಿ ಬಿತ್ತಲು ಹೇಳುತ್ತಾನೆ. ಯಂಜೇರಿ ಸಿದ್ದರ ಕರುಣೆಯಿಂದ ಗೌಡ ಹೇಳಿದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವ ಮೂಲಕ ನಿಂಗಣ್ಣ ಅಚ್ಚರಿ ಮೂಡಿಸುತ್ತಾನೆ.

ಗೌಡ ತನ್ನ ಆರೂ ಹೆಣ್ಣು ಮಕ್ಕಳ ಮದುವೆ ಮುಗಿಸಿದರೂ ನಿಂಗಣ್ಣನಿಗೆ ಹೆಣ್ಣು ಕೊಡುವ ಸೂಚನೆ ಕಾಣದಾದಾಗ, ಬೇಸರಗೊಂಡ ನಿಂಗಣ್ಣ ಯಂಜಾರಪ್ಪನ ತಮ್ಮನಾದ ಸಿದ್ದಪ್ಪ ದೇವರ ಮೊರೆ ಹೋಗುತ್ತಾನೆ.

ಏಳನೆಯ ಮಗಳ ಮದುವೆಯೂ ನಿಶ್ಚಯವಾಗಿ, ಮದುವೆ ಕಾರ್ಯಗಳು ಸಾಗುವುದನ್ನು ಕಂಡು ಕೋಪಗೊಂಡ ಸಿದ್ದಪ್ಪ ‘ಈ ಊರು ನಾಶವಾಗಲಿ, ಇಲ್ಲಿನ ಜನ ಶಿಲೆಗಳಾಗಲಿ’ ಎಂದು ಶಾಪ ಕೊಟ್ಟನಂತೆ. ಈಗಲೂ ಗ್ರಾಮದಲ್ಲಿ ನಾಶವಾದ ಕೋಟೆ, ಮನೆಗಳ ಅವಶೇಷಗಳನ್ನು ಗುರುತಿಸಬಹುದು.

ಇದಾದ ನಂತರ ಸಿದ್ದಪ್ಪ ವದ್ದೀಗೆರೆಯ ಬಳಿ ಬಂದಾಗ ಬಾಯಾರಿಕೆಯಾಗುತ್ತದೆ. ತನ್ನಲ್ಲಿದ್ದ ತ್ರಿಶೂಲದಿಂದ ನೆಲವನ್ನು ತಿವಿದಾಗ ನೀರು ಚಿಮ್ಮಿತಂತೆ. ಈಗಲೂ ದೇಗುಲದ ಬಳಿ ಇರುವ ಬಾವಿಯಲ್ಲಿ ವರ್ಷವಿಡೀ ಇರುವ ನೀರು ಜಾತ್ರೆಯ ದಿನ ಇಲ್ಲವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಪ್ರದೇಶದಲ್ಲಿ ವದ್ದಿಮೆಳೆ ದಟ್ಟವಾಗಿದ್ದದ್ದರಿಂದ ‘ವದ್ದೀಗೆರೆ’ ಹೆಸರು ಬಂದಿರಬಹುದು. ಈ ಮೆಳೆಗಳಲ್ಲೇ ಸಿದ್ದಪ್ಪ ವಾಸವಾಗಿದ್ದ ಎಂಬ ನಂಬಿಕೆ ಇದೆ. ಸಿದ್ದೇಶ್ವರ ದೇಗುಲವನ್ನು ರತ್ನದ ವ್ಯಾಪಾರಿಯೊಬ್ಬ ನಿರ್ಮಿಸಿದ ಎನ್ನಲಾಗಿದೆ.

ಚೇಳು ಕಚ್ಚಿದಾಗ ಸಿದ್ದಪ್ಪನ ಸ್ಮರಣೆ ಮಾಡುವುದು ಈ ಭಾಗದಲ್ಲಿ ಹೆಚ್ಚು ಪ್ರತೀತಿ. ಮೊದಲಿನಿಂದಲೂ ಯಾದವ ಜನಾಂಗದವರೇ ದೇವಸ್ಥಾನದ ಪೂಜಾರಿಗಳಾಗಿದ್ದರು. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ ನಂತರ ಬ್ರಾಹ್ಮಣರು ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ. ಬ್ರಹ್ಮ ರಥೋತ್ಸವಕ್ಕೆ ಹೊರಜಿಲ್ಲೆಗಳಿಂದಲೂ ಲಕ್ಷಾಂತರ ಭಕ್ತರು ಬಂದು ಹರಕೆ ತೀರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.