ಚಿತ್ರದುರ್ಗ: ‘ಸಾಧನೆ ಮೂಲಕ ಗುರುತಿಸಿಕೊಂಡು ಸನ್ಮಾನಿತಗೊಂಡ ಪ್ರತಿಭಾವಂತರು ಉನ್ನತ ಸ್ಥಾನಕ್ಕೆ ಹೋದಾಗ ಸಮಾಜದ ಋಣವನ್ನು ತೀರಿಸುವಂತಹ ಕಾರ್ಯ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ನೌಕರರ ಸಮಾವೇಶ, ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಪ್ರತಿಭೆ ಗುರುತಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದು ನಿರಂತರವಾಗಿ ಸಾಗಲಿ’ ಎಂದರು.
‘ಜಿಲ್ಲೆಯ ಮಠಗಳು ಶಿಕ್ಷಣ ದಾಸೋಹ ಮಾಡುತ್ತಿವೆ. ಮಠದಲ್ಲಿ ಕಲಿತರು ಇಂದು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದ್ದರಿಂದ ನಾವು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು’ ಎಂದು ತಿಳಿಸಿದರು.
‘ಕ್ಷೇಮಾಭಿವೃದ್ಧಿ ಸಂಘದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಬಾರದ ರೀತಿಯಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಈ ಮೂಲಕ ಸಂಘವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಬೇಕು. ಯಾವುದೇ ಸಮಸ್ಯೆಗಳು ಬಂದರೂ ನಿಮ್ಮ ಧ್ವನಿಯಾಗಿ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.
‘ಎಲ್ಲಾ ಸಮುದಾಯದವರೂ ಸಂಘಟನೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ನಮ್ಮ ಸಮುದಾಯವನ್ನೂ ಸಂಘಟಿಸಬೇಕು. ಇದಕ್ಕೆ ಹೆದರುವ ಅಗತ್ಯ ಇಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಿ.ಎಂ.ಜಿ.ರಾಜೇಶ್, ಅಧ್ಯಕ್ಷ ಬಿ.ವೀರೇಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.