ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಟೆ ನಾಡಿನ ಐತಿಹಾಸಿಕ ಸಾಧನೆ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಪ್ರಯೋಗಕ್ಕೆ ಯಶಸ್ಸು

​ಪ್ರಜಾವಾಣಿ ವಾರ್ತೆ
Published 9 ಮೇ 2023, 4:23 IST
Last Updated 9 ಮೇ 2023, 4:23 IST
ಕೆ. ರವಿಶಂಕರ್‌ ರೆಡ್ಡಿ
ಕೆ. ರವಿಶಂಕರ್‌ ರೆಡ್ಡಿ   

ಜಿ.ಬಿ. ನಾಗರಾಜ್‌

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 96.8ರಷ್ಟು ದಾಖಲೆಯ ಫಲಿತಾಂಶದೊಂದಿಗೆ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ಹಿರಿಮೆ ಕೋಟೆ ನಾಡಿಗೆ ದಕ್ಕಿದ್ದು, ಶೈಕ್ಷಣಿಕ ವಲಯದಲ್ಲಿ ಸಂಚಲನ ಉಂಟು ಮಾಡಿದೆ.

ಕಳೆದ ವರ್ಷ ಶೇ 94.31 ಫಲಿತಾಂಶ ಪಡೆದಿದ್ದ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ವರ್ಷ ಶೇ 2.5 ಫಲಿತಾಂಶ ಸುಧಾರಿಸಿದ್ದು, ಮೊದಲ ಸ್ಥಾನಕ್ಕೆ ಏರಿದೆ. ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೈಗೊಂಡ ಕ್ರಮಗಳು ಯಶಸ್ಸಿಗೆ ಕಾರಣವಾಗಿವೆ.

ADVERTISEMENT

2016–17ರಲ್ಲಿ ಶೇ 80.85ರಷ್ಟು ಫಲಿತಾಂಶ ಪಡೆದಿದ್ದ ಚಿತ್ರದುರ್ಗ, ರಾಜ್ಯದಲ್ಲಿ 16ನೇ ಸ್ಥಾನದಲ್ಲಿತ್ತು. 2018–19ರಲ್ಲಿ ಶೇ 87.8 ಫಲಿತಾಂಶದೊಂದಿಗೆ ಐದನೇ ಸ್ಥಾನಕ್ಕೆ ಏರಿತ್ತು. ಐದು ವರ್ಷಗಳಲ್ಲಿ ಫಲಿತಾಂಶ ಗಣನೀಯವಾಗಿ ಸುಧಾರಣೆ ಕಂಡಿದೆ. 2019- 20ರಲ್ಲಿ ಶೇ 88.66 ಫಲಿತಾಂಶದೊಂದಿಗೆ ‘ಎ’ ಗ್ರೇಡ್‌ ವ್ಯಾಪ್ತಿಗೆ ಸೇರಿತ್ತು. ಕೋವಿಡ್‌ ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಕಲಿಕಾಸಕ್ತಿ ಕಾಪಾಡಿಕೊಳ್ಳಲು ಶಿಕ್ಷಕರು ಶ್ರಮಿಸಿದ್ದರು.

‘ಎಸ್ಸೆಸ್ಸೆಲ್ಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಿದ್ದೆವು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವುದನ್ನು ತಪ್ಪಿಸಿದೆವು. ಪಾಲಕರು ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದರಿಂದ ಹಾಜರಾತಿ ಹೆಚ್ಚಳವಾಯಿತು. ಇದು ಫಲಿತಾಂಶ ಸುಧಾರಣೆಗೆ ಸಹಕಾರಿಯಾಯಿತು’ ಎನ್ನುತ್ತಾರೆ ಡಿಡಿಪಿಐ ಕೆ. ರವಿಶಂಕರ್‌ ರೆಡ್ಡಿ.

ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸಲು ನಿರಂತರ ಮೌಲ್ಯಮಾಪನ ವಿಧಾನ ಅಳವಡಿಸಿಕೊಳ್ಳಲಾಗಿತ್ತು. ಜೂನ್‌ ತಿಂಗಳಿಂದ ಡಿಸೆಂಬರ್‌ವರೆಗೆ ನಡೆದ ಬೋಧನೆ ಆಧರಿಸಿ ಮಕ್ಕಳ ಮೌಲ್ಯಮಾಪನ ಮಾಡಲಾಗಿತ್ತು. ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಸಮಸ್ಯೆಗಳನ್ನು ಅರಿಯಲು ಈ ವಿಧಾನದಿಂದ ಅನುಕೂಲವಾಯಿತು ಎಂಬುದು ಶಿಕ್ಷಕರ ಅಭಿಪ್ರಾಯ.

ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಒಟ್ಟಾಗಿರುವ ಜೂನಿಯರ್‌ ಕಾಲೇಜುಗಳಲ್ಲಿ ಕಳಪೆ ಫಲಿತಾಂಶ ಬರುತ್ತಿರುವುದನ್ನು ಶಿಕ್ಷಣ ಇಲಾಖೆ ಪತ್ತೆ ಮಾಡಿತ್ತು. ಶಿಕ್ಷಣಾಧಿಕಾರಿ, ವಿದ್ಯಾಧಿಕಾರಿ ಹಾಗೂ ಡಯಟ್‌ ಪ್ರಾಧ್ಯಾಪಕರನ್ನು ಒಳಗೊಂಡ ತಂಡವನ್ನು ರಚಿಸಿ ಜೂನಿಯರ್‌ ಕಾಲೇಜು ಮೇಲ್ವಿಚಾರಣೆಯ ಜವಾಬ್ದಾರಿ ನೀಡಲಾಯಿತು. ಈ ಬಾರಿ ಇಲ್ಲಿನ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ.

‘ಆರೂ ವಿಷಯಗಳ ಶಿಕ್ಷಕರಿಗೆ ಪರಿಣತರಿಂದ ತರಬೇತಿ ನೀಡಲಾಯಿತು. ಶಿಕ್ಷಕರ ಕ್ಲಬ್‌ಗಳ ಸಹಕಾರದಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆತಂದು ಕಾರ್ಯಾಗಾರ ನಡೆಸಲಾಯಿತು. ಬೋಧನೆಯಲ್ಲಿ ಎದುರಾಗುತ್ತಿದ್ದ ತೊಡಕುಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಯಿತು. ವಿಷಯವಾರು ಶಿಕ್ಷಕರು ಶಾಲಾ ಹಂತದಲ್ಲಿ ಸ್ಪಷ್ಟ ಯೋಜನೆ ರೂಪಿಸಿಕೊಂಡರು’ ಎನ್ನುತ್ತಾರೆ ರವಿಶಂಕರ್‌ ರೆಡ್ಡಿ.

ಎಸ್ಸೆಸ್ಸೆಲ್ಸಿಯ ಎಲ್ಲ ವಿಷಯಗಳಲ್ಲಿ ಅಂಕ ಗಳಿಕೆ (ಸ್ಕೋರಿಂಗ್‌) ಹಾಗೂ ಉತ್ತೀರ್ಣ (ಪಾಸಿಂಗ್‌) ಪ್ಯಾಕೇಜ್‌ ರೂಪಿಸಲಾಗಿತ್ತು. ಪ್ರಮುಖ ಪಾಠ, ಪದ್ಯಗಳನ್ನು ಒಳಗೊಂಡ ಸಾಹಿತ್ಯ ರಚಿಸಿ ಮಕ್ಕಳಿಗೆ ವಿತರಿಸಲಾಗಿತ್ತು. ಕಳೆದ ಕೆಲ ವರ್ಷಗಳಿಂದ ನಡೆಸುತ್ತಿರುವ ಈ ಪ್ರಯೋಗ ಮಕ್ಕಳ ಕೈಹಿಡಿದಿದೆ.

ಪ್ರಥಮ ಸ್ಥಾನಕ್ಕೆ ಏರಬೇಕು ಎಂಬ ಗುರಿಯ ಸವಾಲನ್ನು ಸ್ವೀಕರಿಸಿದ್ದೆವು. ಶಿಕ್ಷಕರು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದ ಫಲವಾಗಿ ಫಲಿತಾಂಶ ಸುಧಾರಣೆ ಕಂಡಿದೆ ಕೆ. ರವಿಶಂಕರ್‌ ರೆಡ್ಡಿ ಡಿಡಿಪಿಐ ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.