ಹರಿಹರ: ನಗರದ ಪ್ರಶಾಂತನಗರದಲ್ಲಿ ನಾಯಿಗಳ ಹಿಂಡಿನಿಂದ ತಪ್ಪಿಸಿಕೊಳ್ಳುವಾಗ ಚರಂಡಿಗೆ ಬಿದ್ದು ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಲಿ ಕೆಲಸಗಾರ ಮೈನುದ್ದೀನ್ ಖಾನ್ ಇವರ ಪುತ್ರ 8ನೇ ತರಗತಿ ವಿದ್ಯಾರ್ಥಿ ಮೊಹ್ಮದ್ ಅಲಿ ಖಾನ್ (13) ಗಾಯಗೊಂಡ ಬಾಲಕ. ಆ. 21 ರಂದು ಸಂಜೆ 7.30ಕ್ಕೆ ಮನೆಯ ಸಮೀಪ ನಾಯಿಗಳ ಹಿಂಡು ಬಾಲಕನ ಬೆನ್ನು ಹತ್ತಿದೆ. ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ರಸ್ತೆ ಬದಿಯ ಚರಂಡಿಗೆ ಬಿದ್ದು ಹಣೆ, ಮೂಗು, ತುಟಿ ಹಾಗೂ ಕೈ, ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಪ್ರಜ್ಞೆ ತಪ್ಪಿ ಚರಂಡಿಯಲ್ಲೇ ಅರ್ಧ ಗಂಟೆ ನರಳಾಡಿದ್ದಾನೆ.
ಬಳಿಕ ಗಾಯಗೊಂಡ ಬಾಲಕನನ್ನು ಪತ್ತೆಹಚ್ಚಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರೆ. ನಂತರ, ದಾವಣಗೆರೆ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಆಸ್ಪತ್ರೆ ಹಾಗೂ ಔಷಧಿಗೆ ಈವರೆಗೆ ₹ 50,000 ಖರ್ಚಾಗಿದೆ. ಮೂಗಿನ ಹೊರಭಾಗದಲ್ಲಿ ಮೂಳೆ ಮುರಿದಿದ್ದು, ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ತಲೆಯೊಳಗೆ ಸಂಪರ್ಕ ಹೊಂದಿರುವ ಸೂಕ್ಷ್ಮ ಮೂಳೆಗೂ ಶಸ್ತ್ರ ಚಿಕಿತ್ಸೆಯನ್ನು ಆರು ತಿಂಗಳ ನಂತರ ಮಾಡಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಮೈನುದ್ದೀನ್ ಖಾನ್ ತಿಳಿಸಿದರು.
‘ಬೀಡಿ ಕಟ್ಟುವ ಕೆಲಸ ಮಾಡುವ ನನ್ನ ಪತ್ನಿಗೆ ಆರೋಗ್ಯದ ಸಮಸ್ಯೆ ಇದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಭಾರ ನನ್ನ ಮೇಲಿದೆ. ಇದರ ಜೊತೆಗೆ ಮಗನ ಸ್ಥಿತಿ ಹೀಗಾಗಿದೆ, ಬಡ್ಡಿಯಿಂದ ಹಣ ತಂದು ಚಿಕಿತ್ಸೆ ಕೊಡಿಸುತ್ತಿದ್ದೇನೆ. ಹೀಗಿರುವಾಗ ಶಸ್ತ್ರ ಚಿಕಿತ್ಸೆಗೆ ಹಣ ಎಲ್ಲಿಂದ ತರಲಿ’ ಎಂದು ಅಳಲನ್ನು ತೋಡಿಕೊಂಡರು.
ಪ್ರಶಾಂತನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಇರುವ ಬೀದಿ ನಾಯಿ ಕಾಟ ತಪ್ಪಿಸಲು ನಗರಸಭೆಗೆ ಹಲವು ಬಾರಿ ಈ ಭಾಗದ ಸಾರ್ವಜನಿಕರು ಮನವಿ ನೀಡಿದ್ದರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ತಮ್ಮ ಬೇಸರ ವ್ಯಕ್ತಪಡಿಸಿದರು.
ಪೋಷಕರ ದೂರನ್ನಾಧರಿಸಿ ನಗರಸಭೆ ಪೌರಾಯುಕ್ತ ಹಾಗೂ ಪರಿಸರ ಇಂಜಿನಿಯರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.