ಹೊಳಲ್ಕೆರೆ: ಬೇಸಿಗೆ ರಜೆ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಅಗ್ನಿಶಾಮಕ ಅಧಿಕಾರಿ ಜಗದೀಶ್ ಸಲಹೆ ನೀಡಿದರು.
ತಾಲ್ಲೂಕಿನ ರಂಗಾಪುರದ ಋಷಿ ಗುರುಕುಲ ಆಶ್ರಮದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ಅನೇಕ ಕಡೆ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದೆ. ಪೋಷಕರು ಕೆರೆಯಲ್ಲಿ ಮಕ್ಕಳು ಈಜಲು ಹೋಗದಂತೆ ನೋಡಿಕೊಳ್ಳಬೇಕು. ಲೈಫ್ ಜಾಕೆಟ್ ಇಲ್ಲದೆ ಈಜಲು ಹೋಗಬಾರದು. ಈಜು ತರಬೇತಿ ನೀಡುವವರು ಎಚ್ಚರ ವಹಿಸಬೇಕು ಎಂದರು.
ಅಗ್ನಿ ಅವಘಡಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಅಡುಗೆ ಅನಿಲ ಸಿಲೆಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡರೆ ಒದ್ದೆ ಬಟ್ಟೆಯಿಂದ ಮುಚ್ಚಿ ಬೆಂಕಿ ನಂದಿಸಬೇಕು. ಶಾಲೆಗಳಲ್ಲಿ, ದೊಡ್ಡ ಅಂಗಡಿಗಳಲ್ಲಿ ಅಗ್ನಿ ನಂದಕಗಳಿದ್ದು, ಅವುಗಳನ್ನು ಬಳಸಬೇಕು. ದೇಹಕ್ಕೆ ಬೆಂಕಿ ತಗುಲಿದರೆ ಕಣ್ಣು ಮುಚ್ಚಿ ನೆಲದಲ್ಲಿ ಹೊರಳಾಡುವ ಮೂಲಕ ಬೆಂಕಿ ನಂದಿಸಿಕೊಳ್ಳಬೇಕು. ಪಕ್ಕದಲ್ಲಿರುವವರು ಬೆಂಕಿ ತಗುಲಿದ ವ್ಯಕ್ತಿಗೆ ಬ್ಲಾಂಕೆಟ್ ಮೂಲಕ ಮುಚ್ಚಬೇಕು. ದೇಹಕ್ಕೆ ತಣ್ಣೀರು ಸುರಿಯಬೇಕು ಎಂದು ಸಲಹೆ ನೀಡಿದರು.
‘ರೈತರು ಬಣವೆ ಹಾಕುವಾಗ ಅಂತರ ಹೆಚ್ಚಿರಬೇಕು. ವಿದ್ಯುತ್ ಲೈನ್ ಕೆಳಗೆ ಬಣವೆ ಹಾಕಬಾರದು. ಸುತ್ತಲಿನ ಬೇಲಿ ಸ್ವಚ್ಛ ಮಾಡಿಕೊಳ್ಳಬೇಕು. ರಸ್ತೆ ಮೇಲೆ ಒಕ್ಕಣೆ ಮಾಡಬಾರದು. ಇದರಿಂದ ವಾಹನಗಳಿಗೆ ಬೆಂಕಿ ತಗುಲುವ ಸಾಧ್ಯತೆ ಇರುತ್ತದೆ. ‘ಅಗ್ನಿ ಸುರಕ್ಷಿತ ಭಾರತವನ್ನು ಹುಟ್ಟು ಹಾಕಲು ಒಂದಾಗೋಣ’ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಅಗ್ನಿ ಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತಿದೆ. ಅಗ್ನಿ ಅವಘಡಗಳು ಸಂಭವಿಸಿದಾಗ 112ಕ್ಕೆ ಕರೆ ಮಾಡಬೇಕು’ ಎಂದು ಹೇಳಿದರು.
ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಜಯಪ್ರಕಾಶ್, ಹವಿತ್ ಕುಮಾರ್, ತೌಸಿಫ್, ಹರೀಶ್, ಲಕ್ಷಣ ಅರಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.