ADVERTISEMENT

ವಿಶ್ವಶಾಂತಿಗೆ ಸೇವೆ-ಅಧಿಕಾರ ಒಂದಾಗಲಿ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:33 IST
Last Updated 19 ಫೆಬ್ರುವರಿ 2019, 19:33 IST

ಸಿರಿಗೆರೆ: ‘ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘೋರ ಘಟನೆಗಳು ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯದಿರಲಿ. ಸೇವೆ ಮತ್ತು ಅಧಿಕಾರ ಒಂದಾಗುವವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ’ ಎಂದು ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸರಳ ಸಮಾರಂಭದಲ್ಲಿ ಸದ್ಧರ್ಮ ಸಿಂಹಾಸನಾರೋಹಣ ಮಾಡಿ, ಆಶೀರ್ವಚನ ನೀಡಿದರು.

‘ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಅತ್ಯಂತ ವಿಷಾದನೀಯ. ಭಾರತದ ವೇದಗಳ ಆಶಯದಂತೆ ವಿಶ್ವದ ಜನ ಶಾಂತಿ ಕೇಳುತ್ತಿದ್ದಾರೆ. ಶಾಂತಿ ಬೇಕು ಎಂದು ಎಲ್ಲಾ ದೇಶದ ನಾಯಕರು ಹೇಳುತ್ತಿದ್ದಾರೆ. ಆದರೆ, ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದು ಪ್ರಶ್ನೆ’ ಎಂದರು.

ADVERTISEMENT

‘ಯಾರಿಗೆ ಅಧಿಕಾರ ಇದೆಯೋ ಅವರಿಗೆ ಸೇವಾ ಮನೋಭಾವ ಇಲ್ಲ. ಸೇವಾ ಮನೋಭಾವ ಇದ್ದವರಿಗೆ ಅಧಿಕಾರ ಇಲ್ಲ. ಸೇವೆ ಮತ್ತು ಅಧಿಕಾರ ಎಲ್ಲಿಯವರೆಗೆ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ, ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಅವರೆಲ್ಲರೂ ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ. ಸೂಳೆಕರೆ ಏತ ನೀರಾವರಿಗೆ ಯಡಿಯೂರಪ್ಪ ಸರ್ಕಾರ ಅನುದಾನ ನೀಡಿತು. ಅದರ ಮೊತ್ತ ಹೆಚ್ಚಾದಾಗ ನಂತರ ಬಂದ ಮುಖ್ಯಮಂತ್ರಿ ನೀಡಿದ್ದಾರೆ. ಈ ಯೋಜನೆ ಆಗದಿದ್ದರೆ ಸಿರಿಗೆರೆ ಸುತ್ತ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತಿತ್ತು’ ಎಂದರು.

‘ಕುಮಾರಸ್ವಾಮಿ ಅವರು ಎರಡು ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ. ರಾಜ್ಯ ನೀರಾವರಿ ನಿಗಮ ಬೋರ್ಡ್ ಮೀಟಿಂಗ್‍ನಲ್ಲಿ ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜೆನೆಗೆ ₹ 1,200 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು ಹಿಡಿದಿಡುವ ಕೆಲಸ ಆಗಬೇಕು. ಆ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಸಂಸದ ಜನಾರ್ದನ ಸ್ವಾಮಿ, ಸಾದು ಸದ್ಧರ್ಮ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಮಾಡಾಳು ವಿರೂಪಾಕ್ಷಪ್ಪ, ರಾಮಚಂದ್ರಪ್ಪ, ವೇದಮೂರ್ತಿ, ಲಕ್ಷ್ಮೀನಾರಾಯಣ್ ಇದ್ದರು.

ಯೋಧರ ನಿಧಿಗೆ ₹ 10 ಲಕ್ಷ

‘ವೀರ ಯೋಧರ ತ್ಯಾಗ ಮತ್ತು ಬಲಿದಾನವೇ ನಮ್ಮ ನೆಮ್ಮದಿಗೆ ಕಾರಣ. ಅವರ ಕುಟುಂಬ ನೋವಿನಲ್ಲಿದೆ. ಮಠದಿಂದ ಯೋಧರ ನಿಧಿಗೆ ₹ 10 ಲಕ್ಷ ಕಳಿಸಲು ನಿರ್ಧರಿಸಿದ್ದೇವೆ. ಅದನ್ನು ಸಂಸದರು ಪ್ರಧಾನಮಂತ್ರಿಗೆ ತಲುಪಿಸಿ. ಇಂತಹ ದುರ್ಘಟನೆ ಮತ್ತೆ ಸಂಭವಿಸದಿರಲಿ. ವಿಶ್ವದ ಯಾವುದೇ ಮೂಲೆಯಲ್ಲೂ ಇಂಥ ಘಟನೆಗಳು ನಡೆಯದಿರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.