ADVERTISEMENT

ಕುಂಚಿಟಿಗರ ಮಠಕ್ಕೆ ₹ 10 ಕೋಟಿ ಅನುದಾನ ನೀಡಿ

ಅಡವಿಸಂಗೇನಹಳ್ಳಿ: ರಾಜ್ಯಮಟ್ಟದ ಕುಂಚಿಟಿಗರ ಸಮಾವೇಶದಲ್ಲಿ ಶಾಂತವೀರ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 12:49 IST
Last Updated 29 ಫೆಬ್ರುವರಿ 2020, 12:49 IST
ಹೊಸದುರ್ಗ ತಾಲ್ಲೂಕಿನ ಅಡವಿಸಂಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ರಾಜ್ಯಮಟ್ಟದ ಕುಂಚಿಟಿಗರ ಸಮಾವೇಶ ಸಮಾರಂಭವನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು (ಎಡಚಿತ್ರ). ಸಮಾವೇಶಕ್ಕೆ ಆಗಮಿಸಿದ್ದ ಜನಸಾಗರ.
ಹೊಸದುರ್ಗ ತಾಲ್ಲೂಕಿನ ಅಡವಿಸಂಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ರಾಜ್ಯಮಟ್ಟದ ಕುಂಚಿಟಿಗರ ಸಮಾವೇಶ ಸಮಾರಂಭವನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು (ಎಡಚಿತ್ರ). ಸಮಾವೇಶಕ್ಕೆ ಆಗಮಿಸಿದ್ದ ಜನಸಾಗರ.   

ಹೊಸದುರ್ಗ: ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ಸರ್ಕಾರದಿಂದ ₹ 10 ಕೋಟಿ ಅನುದಾನವನ್ನು ಜಿಲ್ಲೆಯ ಶಾಸಕರು ಕೊಡಿಸಬೇಕು ಎಂದು ಶಾಂತವೀರ ಸ್ವಾಮೀಜಿ ಮನವಿ ಮಾಡಿದರು.

ತಾಲ್ಲೂಕಿನ ಕಸಬಾ ಹೋಬಳಿ ಅಡವಿಸಂಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ 30ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ರಾಜ್ಯ ಮಟ್ಟದ ಕುಂಚಿಟಿಗರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹೊಸದುರ್ಗದ ಸಂಗಮೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಗೂಳಿಹಟ್ಟಿ ಡಿ.ಶೇಖರ್‌ ₹ 5 ಕೋಟಿ ನೀಡಬೇಕು. ಹೊಳಲ್ಕೆರೆಯ ಕುಂಚಿಟಿಗ ಸೇವಾ ಸಮಿತಿ ಟ್ರಸ್ಟ್‌ ಸಮುದಾಯ ಭವನವನ್ನು ಎಂ.ಚಂದ್ರಪ್ಪ ಕಟ್ಟಿಸಿಕೊಡಬೇಕು. ಹಾಗೆಯೇ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಐಮಂಗಲದಲ್ಲಿರುವ ಶ್ರೀಮಠದ 8 ಎಕರೆ ಜಮೀನಿನ ಅಭಿವೃದ್ಧಿಗೆ ₹ 5 ಕೋಟಿ ಅನುದಾನ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ‘ಶಾಂತವೀರ ಸ್ವಾಮೀಜಿ ಅವರು ಕುಂಚಿಟಿಗ ಜನರಲ್ಲಿ ಜಾಗೃತಿ ಹಾಗೂ ಸಂಚಲನವನ್ನುಂಟು ಮಾಡುವ ರೀತಿಯಲ್ಲಿ ಕಾಯಕ ಮಾಡುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ. 23 ವರ್ಷಗಳ ಹಿಂದೆ ಕುಂಚಿಟಿಗ ಸಮಾಜದ ರಥ ಎಳೆಯುವ ಕಾರ್ಯ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಒಬ್ಬ ಸ್ವಾಮೀಜಿ ಕೊಡುವ ಕೆಲಸವನ್ನು ಮುರುಘಾ ಮಠವು ಪ್ರಾಮಾಣಿಕವಾಗಿ ಮಾಡಿದೆ’ ಎಂದು ತಿಳಿಸಿದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಕುಂಚಿಟಿಗ ಸಮಾಜಕ್ಕೆ ಅರ್ಹ ಗುರುಗಳು ಸಿಕ್ಕಿದ್ದು, ಶಾಂತವೀರ ಸ್ವಾಮೀಜಿ ಈ ಸಮಾಜದ ಅಭಿವೃದ್ಧಿಯ ಸಂಕಲ್ಪ ಮಾಡಿದ್ದಾರೆ. ಇಂತಹ ಗುರುಗಳ ಹಾದಿಯಲ್ಲಿ ಭಕ್ತರು ನಡೆದುಕೊಂಡಲ್ಲಿ ಶ್ರೀಮಠ ಹಾಗೂ ಸಮಾಜಕ್ಕೆ ಹೆಚ್ಚು ಗೌರವ ಸಿಗುತ್ತದೆ. ಇಂತಹ ಜಯಂತಿಯ ಮೂಲಕ ಕುಂಚಿಟಿಗರು ಸಂಘಟಿತರಾಗುತ್ತಿದ್ದಾರೆ. ನಾವು ಒಳ್ಳೆಯ ಕೆಲಸ ಮಾಡಲು ಹೊರಟಾಗ ವಿಪತ್ತು, ಆಪಾದನೆ ಬರುತ್ತವೆ. ಇದಕ್ಕೆ ಧೃತಿಗೆಡಬಾರದು. ಹೊಟ್ಟೆಕಿಚ್ಚು ಪಡುವ ಜನ ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಹಾಗೆಂದು ನಾವು ಮನೋಸ್ಥೈರ್ಯ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ‘ಜಲದಿಬೊಪ್ಪರಾಯ ಕುಂಚಿಟಿಗರ ಮೂಲ ಕುಲಗುರು. ಅವರು ವಿಜಯನಗರ ಸಾಮ್ರಾಜ್ಯದಿಂದ ನಂದನಹೊಸೂರಿಗೆ ಬಂದು ನೆಲೆಸಿ, ಸಮಾಜದ ಸಂಘಟನೆಗೆ ಶ್ರಮಿಸಿದರು. ನಾನು ಶಾಸಕನಾಗಿದ್ದಾಗ ಸಂಗಮೇಶ್ವರ ಜಯಂತಿ ಆಚರಣೆಗೆ ಚಾಲನೆ ನೀಡಿದ್ದೆವು. 30 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಮಾವೇಶದಲ್ಲಿ ಮಧ್ಯ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದೇವೆ’ ಎಂದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಹಡಪದ ಅಪ್ಪಣ್ಣ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.

‘ಸಂಗಮೇಶ್ವರ ಸಮುದಾಯ ಭವನ ಅಭಿವೃದ್ಧಿ ಸಮಿತಿ’ ನಾಮಫಲಕವನ್ನು ಗೂಳಿಹಟ್ಟಿ ಡಿ.ಶೇಖರ್‌ ಅನಾವರಣಗೊಳಿಸಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಂಗಮೇಶ್ವರ ಮಠದ ನಾಮಫಲಕ ಲೋಕಾರ್ಪಣೆ ಮಾಡಿದರು.

ತಾಲ್ಲೂಕು ಕುಂಚಿಟಿಗ ಸಮಾಜದ ಅಧ್ಯಕ್ಷ ಕೆ.ಸಿ.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಚಂದ್ರಪ್ಪ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಶಾಸಕರಾದ ಟಿ.ಎಚ್‌.ಬಸವರಾಜು, ರಮೇಶ್‌, ಕೇಂದ್ರ ಕುಂಚಿಟಿಗ ಸಮಿತಿ ಅಧ್ಯಕ್ಷ ಎಚ್‌.ಆರ್‌.ಕಲ್ಲೇಶಣ್ಣ, ಮುಖಂಡರಾದ ಹಾಲಪ್ಪ, ಶಿವಭದ್ರಯ್ಯ, ಕೆ.ಎಸ್‌.ನವೀನ್‌, ಎಸ್‌.ಲಿಂಗಮೂರ್ತಿ, ಮುರುಳೀಧರ್‌, ಶ್ರೀನಿವಾಸ್‌ ಪೂರ್ಣಿಮಾ ಇದ್ದರು.

ಸಮಾರಂಭಕ್ಕೂ ಮೊದಲು ವಿವಿಧ ಮಠಾಧೀಶರನ್ನು ಸಾರೋಟಿನಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.