ADVERTISEMENT

ಆರ್ಯ ಈಡಿಗರ ಅಭಿವೃದ್ಧಿ ಚಿಂತನೆ ಅಗತ್ಯ

ಪ್ರಣವಾನಂದ ರಾಮಸ್ವಾಮೀಜಿ ಅವರಲ್ಲಿ ಜನಾಂಗದ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:02 IST
Last Updated 7 ಜುಲೈ 2021, 10:02 IST
ಹಿರಿಯೂರಿನ ಪ್ರವಾಸಿ ಮಂದಿರಕ್ಕೆ ಮಂಗಳವಾರ ಬಂದಿದ್ದ ಆರ್ಯ ಈಡಿಗ ಸಮಾಜದ ಪ್ರಣವಾನಂದ ರಾಮಸ್ವಾಮೀಜಿ ಅವರು ಜನಾಂಗದ ಮುಖಂಡರ ಜೊತೆ ಹೇಮಗುಡ್ಡದಲ್ಲಿ ನಡೆಯಲಿರುವ ಜನಾಂಗದ ಚಿಂತನ–ಮಂಥನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.
ಹಿರಿಯೂರಿನ ಪ್ರವಾಸಿ ಮಂದಿರಕ್ಕೆ ಮಂಗಳವಾರ ಬಂದಿದ್ದ ಆರ್ಯ ಈಡಿಗ ಸಮಾಜದ ಪ್ರಣವಾನಂದ ರಾಮಸ್ವಾಮೀಜಿ ಅವರು ಜನಾಂಗದ ಮುಖಂಡರ ಜೊತೆ ಹೇಮಗುಡ್ಡದಲ್ಲಿ ನಡೆಯಲಿರುವ ಜನಾಂಗದ ಚಿಂತನ–ಮಂಥನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.   

ಹಿರಿಯೂರು: ‘ಮದ್ಯ ವಹಿವಾಟನ್ನು ಮುಖ್ಯವಾಗಿ ನಡೆಸುತ್ತಿದ್ದ ಆರ್ಯ ಈಡಿಗ ಸಮುದಾಯದವರು ತಮ್ಮ ಮೂಲ ವೃತ್ತಿ ಬಿಟ್ಟಿದ್ದು, ಸಮಾಜದ ಯುವ ಪೀಳಿಗೆಯ ಶಿಕ್ಷಣ, ಉದ್ಯೋಗ, ವ್ಯಾಪಾರಾಭಿವೃದ್ಧಿ ಬಗ್ಗೆ ಸ್ವಾಮೀಜಿ ಚಿಂತನೆ ನಡೆಸಬೇಕು’ ಎಂದು ಜನಾಂಗದ ಮುಖಂಡರು ಮನವಿ ಮಾಡಿದರು.

ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ಜುಲೈ 27ರಂದು ನಡೆಯಲಿರುವ ಆರ್ಯ ಈಡಿಗ ಸಮಾಜದ ಸಂಘಟನೆ ಕುರಿತ ‘ಚಿಂತನ ಮಂಥನ’ ಕಾರ್ಯಕ್ರಮದ ನಿಮಿತ್ತ ಚರ್ಚಿಸಲು ಮಂಗಳವಾರ ನಗರದ ಪ್ರವಾಸಿ ಮಂದಿರಕ್ಕೆ ಬಂದಿದ್ದ ಪ್ರಣವಾನಂದ ರಾಮಸ್ವಾಮೀಜಿ ಅವರೊಂದಿಗೆ ನಡೆದ ಸಭೆಯಲ್ಲಿ ಜನಾಂಗದ ಮುಖಂಡರು ಮೇಲಿನಂತೆ ಮನವಿ ಮಾಡಿದರು.

‘ಜನಾಂಗಕ್ಕೆ ಅಭಿವೃದ್ಧಿ ನಿಗಮ ಆರಂಭಿಸುವುದರಿಂದ ಹೆಚ್ಚಿನ ಪ್ರಯೋಜನ ಆಗದು. ಈಡಿಗ ಸಮುದಾಯಕ್ಕೆ ಸೇರಿದವರು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿ
ಕೊಂಡಿದ್ದಾರೆ. ಹೀಗಾಗಿ ಮೂಲ ವೃತ್ತಿಗೆ ಸಂಬಂಧಿಸಿದ ಬೇಡಿಕೆಗಳಿಗಿಂತ ಶಾಶ್ವತ ಪರಿಹಾರ ಸಿಗುವಂತಹ ಬೇಡಿಕೆಗಳಿಗೆ ಸ್ವಾಮೀಜಿ ಪ್ರಯತ್ನ ಮಾಡಬೇಕು’ ಎಂದು ಮುಖಂಡರು ತಿಳಿಸಿದರು.

ADVERTISEMENT

‘2017ರಲ್ಲಿ ಸಿದ್ದರಾಮಯ್ಯ ಸಿ.ಎಂ. ಆಗಿದ್ದಾಗ ಹಿರಿಯೂರಿನಲ್ಲಿ ಈಡಿಗ ಸಮುದಾಯ ಭವನಕ್ಕೆ
₹ 67.50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರು. ಸರ್ಕಾರದಿಂದ
₹ 15 ಲಕ್ಷ ಮಾತ್ರ ಬಿಡುಗಡೆ ಆಗಿದೆ. ನಾವು ಸುಮಾರು ₹ 30 ಲಕ್ಷ ಖರ್ಚು ಮಾಡಿದ್ದು, ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಮೂಲಕ ಬಾಕಿ ಹಣ ಬಿಡುಗಡೆ ಮಾಡಿಸಬೇಕು’ ಎಂದು ಮುಖಂಡರು ಮನವಿ
ಮಾಡಿದರು.

‘ಮುಂದಿನ ವಾರ ಸಚಿವರನ್ನು ಸಂಪರ್ಕಿಸಿ ಸಮುದಾಯ ಭವನದ ಬಾಕಿ ಹಣ ಬಿಡುಗಡೆ ಮಾಡಿಸುತ್ತೇನೆ. ಹೇಮಗುಡ್ಡದ ಸಭೆಗೆ ಹಿರಿಯೂರು ತಾಲ್ಲೂಕಿನಿಂದ 20 ಜನ ಮಾತ್ರ ಬರಬೇಕು’ ಎಂದು ಪ್ರಣಾವನಂದ ರಾಮಸ್ವಾಮೀಜಿ
ಸೂಚಿಸಿದರು.

ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಜೆ.ಆರ್. ಅಜಯಕುಮಾರ್, ಉಪಾಧ್ಯಕ್ಷ ಎ. ಉಮೇಶ್, ಯುವಕ ಸಂಘದ ಅಧ್ಯಕ್ಷ ಧನರಾಜ್, ಡಿ. ತಿಪ್ಪೇಸ್ವಾಮಿ, ವಿ. ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಎನ್. ಜಗದೀಶ್, ಶ್ರೀನಿವಾಸ್, ರವೀಂದ್ರ ನಾಥ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.