ADVERTISEMENT

ಗೌರಸಮುದ್ರದಲ್ಲಿಲ್ಲ ಗಣಪತಿ ಉತ್ಸವ

ಹಬ್ಬ ಆಚರಿಸಲು ಹೋದವರಿಗೆ ಕಹಿ ಅನುಭವ

ಕೊಂಡ್ಲಹಳ್ಳಿ ಜಯಪ್ರಕಾಶ
Published 12 ಸೆಪ್ಟೆಂಬರ್ 2021, 5:15 IST
Last Updated 12 ಸೆಪ್ಟೆಂಬರ್ 2021, 5:15 IST
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಗೌರಸಮುದ್ರದ ಪ್ರಸಿದ್ಧ ಮಾರಮ್ಮದೇವಿ ದೇವಸ್ಥಾನ.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಗೌರಸಮುದ್ರದ ಪ್ರಸಿದ್ಧ ಮಾರಮ್ಮದೇವಿ ದೇವಸ್ಥಾನ.   

ಮೊಳಕಾಲ್ಮುರು: ದೇಶದ ಪ್ರಮುಖ ಹಬ್ಬಗಳಲ್ಲಿ ಗಣೇಶೋತ್ಸವ ಒಂದು. ವಯಸ್ಸಿನ ಭೇದವಿಲ್ಲದೇ ಎಲ್ಲರೂ ಭಾಗಿಯಾಗುವ ಹಬ್ಬವೆಂದು ಗಣೇಶೋತ್ಸವ ಖ್ಯಾತಿಯಾಗಿದೆ.

ಆದರೆ, ಎಲ್ಲರೂ ಹುಬ್ಬೇರಿಸುವಂತೆ ಇಲ್ಲೊಂದು ಗ್ರಾಮವು ಗಣೇಶೋತ್ಸವ ಆಚರಣೆಯಿಂದ ಸಂಪೂರ್ಣ ದೂರವಾಗಿದೆ. ಹೌದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ತಳಕು ಹೋಬಳಿ ಗೌರಸಮುದ್ರವೇ ಈ ಗ್ರಾಮ.

‘ಪ್ರಸಿದ್ಧ ಮಾರಮ್ಮದೇವಿ ನೆಲೆಸಿರುವ ಸ್ಥಳವಾದ ಗೌರಸಮುದ್ರ ಮಾರಮ್ಮದೇವಿ ಜಾತ್ರೆಯೂ ಬಹುತೇಕವಾಗಿ ಗಣೇಶೋತ್ಸವ ಸಮಯಕ್ಕೆ ಬರುವುದು ಗಣೇಶ ಪ್ರತಿಷ್ಠಾಪನೆ ಮಾಡದಿರುವುದಕ್ಕೆ ಒಂದು ಕಾರಣವಿರಬಹುದು. ಆದರೆ, ಇದನ್ನು ಪರೀಕ್ಷಿಸಲು 2005ರಲ್ಲಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಅಂಬಿಕಾ ಸರ್ಕಸ್ ಕಂಪನಿಯವರು ಗ್ರಾಮಸ್ಥರ ಮಾತು ಕೇಳದೇ ಸರ್ಕಸ್ ಕಂಪನಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮೆರವಣಿಗೆ ನಡೆಸಿದರು. ಆಗ ಟ್ರ್ಯಾಕ್ಟರ್ ಅಪಘಾತವಾಯಿತು. ಇದಾದ ನಂತರ ಸರ್ಕಸ್ ಕಂಪನಿ ಪೂರ್ಣವಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿ ಮುಚ್ಚಿತು’ ಎಂದು ಗ್ರಾಮದ ವಕೀಲ ಚಂದ್ರಣ್ಣ
ಹೇಳಿದರು.

ADVERTISEMENT

‘ಜೊತೆಗೆ ಗ್ರಾಮದಲ್ಲಿ ಹೋಳಿಗಮ್ಮ ಆಚರಣೆ, ಕಾರ್ತಿಕೋತ್ಸವ ಸಹ ಆಚರಿಸುವುದಿಲ್ಲ. ಎಲ್ಲ ಸಂಕಷ್ಟಗಳನ್ನು ಮಾರಮ್ಮದೇವಿ ಈಡೇರಿಸುತ್ತಾಳೆ ಎಂಬ ನಂಬಿಕೆ ಇದಕ್ಕೆ ಕಾರಣವಿರಬಹುದು. ಪೂರ್ವ ಕಾಲದಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಚ್ಯುತಿ ಮಾಡದೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು
ಹೇಳಿದರು.

‘ಮಾರಮ್ಮದೇವಿ ಜಾತ್ರೆಯು ಪೂರ್ಣ ಬುಡಕಟ್ಟು ಸಂಸ್ಕೃತಿಗಳ ಅನಾವರಣದ ಜಾತ್ರೆಯಾಗಿದೆ. ಜಾತ್ರೆ ಆರಂಭಕ್ಕೂ ಮುನ್ನ ಗ್ರಾಮಸ್ಥರು ಸೇರಿ ಸಭೆ ನಡೆಸುತ್ತಾರೆ. ಆ ಸಭೆಯಲ್ಲಿ ಜಾತ್ರೆ ಮಾಡುವ ನಿರ್ಣಯ ಕೈಗೊಳ್ಳುತ್ತಾರೆ. ಪ್ರತಿ ಮನೆಯಿಂದ ಒಬ್ಬರು ಸಭೆಗೆ ಬರುತ್ತಾರೆ. ಈ ಸಭೆ ನಡೆದ ನಂತರ ಒಂದು ವಾರ ಕಾಲ ಯಾವ ಮನೆಯಲ್ಲೂ ಒಲೆ ಮೇಲೆ ಹೆಂಚು ಇಡುವಂತಿಲ್ಲ. ಅಡುಗೆಗೆ ಬೇಕಾದ ಪದಾರ್ಥಗಳ ಸಿದ್ಧತೆ ಮೊದಲೇ ಮಾಡಿಕೊಳ್ಳಬೇಕು. ಮಾರಮ್ಮ ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಊದುಬತ್ತಿ, ಗಂಟೆ ಬಾರಿಸುವುದು, ಮಂಗಳಾರತಿ ಮಾಡುವುದು ಸಂಪೂರ್ಣ ನಿಷಿದ್ಧ. ಈ ಸಮಯದಲ್ಲಿ ಸ್ನಾನ ಸಹ ಮಾಡುವಂತಿಲ್ಲ’ ಎಂದು ಮಾಹಿತಿ ನೀಡಿದರು.

ಧಾರ್ಮಿಕ ಆಚರಣೆಗೆ ಮಾತ್ರ ಅನುಮತಿ

ಗೌರಸಮುದ್ರ ಮಾರಮ್ಮದೇವಿ ಜಾತ್ರೆ ರಾಜ್ಯ ಹಾಗೂ ಸೀಮಾಂಧ್ರದ ಮುಖ್ಯ ಜಾತ್ರೆಯಾಗಿದೆ. ರೋಗ ನಿವಾರಕಿ ಎಂದು ಖ್ಯಾತಿ ಪಡೆದಿರುವ ಈ ಜಾತ್ರೆಯನ್ನು ಈ ಬಾರಿ ಕೋವಿಡ್ 3ನೇ ಅಲೆ ಹರಡುವ ಭೀತಿಯಿಂದಾಗಿ ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆ ಮಾಡಿಕೊಳ್ಳಲು ಮಾತ್ರ ಅನುಮತಿ ನೀಡಿದೆ. ನಾಯಕನಹಟ್ಟಿ ಜಾತ್ರೆಗೆ ಅನುಮತಿ ನೀಡಲಾಗಿತ್ತು. ಕೊನೆ ಪಕ್ಷ ದೇವಿಯನ್ನು ತುಮಲು ಸ್ಥಳಕ್ಕೆ ಕರೆದುಕೊಂಡು ಹೋಗಿ ಬರಲು ಅನುಮತಿ ಕೊಡಿ ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.