ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಸದ್ಯಕ್ಕಿಲ್ಲ: ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:49 IST
Last Updated 6 ಫೆಬ್ರುವರಿ 2021, 5:49 IST
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌    

ಚಿತ್ರದುರ್ಗ: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯಾವುದೇ ಅನುದಾನವನ್ನು ಒದಗಿಸಿಲ್ಲ. ಈ ಪ್ರಸ್ತಾವನ್ನು ಸರ್ಕಾರ ಕೈಗೆತ್ತಿಕೊಂಡಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ವಿಧಾನಮಂಡಲದ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ‘ಅನುದಾನದ ಕೊರತೆಯ ಕಾರಣಕ್ಕೆ ಕಾಲೇಜು ವೆಚ್ಚ ಭರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಇದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

‘ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ. ಇದಕ್ಕೆ ನಿಗದಿಪಡಿಸಿದ ಅನುದಾನ ಹಾಗೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಂಜೂರಾದ ಹಣ ಎಷ್ಟು’ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಪ್ರಶ್ನಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್‌, ‘ಹೊಸ ವೈದ್ಯಕೀಯ ಕಾಲೇಜು ಆರಂಭಿಸುವ ಕುರಿತು 2013-14ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತು. 2014ರ ಜೂನ್ 12 ರಂದು ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು. ಆರ್ಥಿಕ ಮಿತವ್ಯಯದ ಕಾರಣದಿಂದ ಕಾಲೇಜು ಆರಂಭಿಸಲಾಗಿಲ್ಲ. ಇದಕ್ಕಾಗಿ ಅಂದಾಜು ₹ 610 ಕೋಟಿ ಅನುದಾನದ ಅಗತ್ಯವಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಅನುದಾನ ಒದಗಿಸಿಲ್ಲ’ ಎಂದರು.

ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದಾಗಿ 2020ರ ನ.12ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರು. ಚಿತ್ರದುರ್ಗ ಜನರಿಗೆ ರಾಜ್ಯ ಸರ್ಕಾರ ದೀಪಾವಳಿ ಸಿಹಿ ನೀಡಿದೇ ಎಂದು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಬಿಜೆಪಿ ಮುಖಂಡರ ನಿಯೋಗ ಹರ್ಷ ವ್ಯಕ್ತಪಡಿಸಿತ್ತು. ಸಚಿವ ಡಾ.ಕೆ. ಸುಧಾಕರ್‌ ಮರುದಿನವೇ ನಗರಕ್ಕೆ ಭೇಟಿ ನೀಡಿ 30 ತಿಂಗಳ ಕಾಲಮಿತಿಯಲ್ಲಿ ಕಾಲೇಜು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.

‘ಸೀರೆ, ಬಳೆ ಉಡುಗೊರೆ’: ‘ದೀಪಾವಳಿ ವೇಳೆ ಅನುದಾನ ನೀಡುವುದಾಗಿ ಸಿಹಿ ನೀಡಿದ್ದ ಸರ್ಕಾರ, ಏಕಾಏಕಿ ವಿಷ ಕೊಡಲು ಮುಂದಾಗಿದೆ’ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಅಸಮಾಧಾನ ಹೊರಹಾಕಿದರು.

‘ಅನುದಾನ ತರದಿದ್ದರೆ ಫೆ. 9ರಂದು ಶಾಸಕರು, ಸಚಿವರು, ಸಂಸದರ ಕಚೇರಿ ಇಲ್ಲವೇ ಮನೆ ಎದುರು ಪ್ರತಿಭಟನೆ ನಡೆಸಿ, ಸೀರೆ, ಬಳೆ ಉಡುಗೊರೆಯಾಗಿ ನೀಡಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.