ADVERTISEMENT

ಮೊಳಕಾಲ್ಮುರು: ಐತಿಹಾಸಿಕ ಸ್ಮಾರಕಕ್ಕೆ ದಾರಿ ಯಾವುದಯ್ಯಾ?

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಡಿಸೆಂಬರ್ 2023, 7:19 IST
Last Updated 18 ಡಿಸೆಂಬರ್ 2023, 7:19 IST
ಅಶೋಕ ಸಿದ್ದಾಪುರದಲ್ಲಿ ಅಶೋಕನ ಶಾಸನ ಇರುವ ಸ್ಥಳ
ಅಶೋಕ ಸಿದ್ದಾಪುರದಲ್ಲಿ ಅಶೋಕನ ಶಾಸನ ಇರುವ ಸ್ಥಳ   

ಮೊಳಕಾಲ್ಮುರು: ಹಲವು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಮೊಳಕಾಲ್ಮುರು ತಾಲ್ಲೂಕು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತವಾಗಿದೆ. ಇಂತಹ ಸ್ಮಾರಕಗಳ ಕುರಿತು ಸೂಕ್ತ ಪ್ರಚಾರ ಹಾಗೂ ಸ್ಥಳದ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸದ ಕಾರಣ, ಆ ತಾಣಗಳು ಇದ್ದೂ ಇಲ್ಲದಂತಾಗಿವೆ ಎಂಬ ಆರೋಪಗಳು ಕೇಳಿಬಂದಿದೆ.

ಕ್ರಿಸ್ತ ಪೂರ್ವದಿಂದಲೂ ತಾಲ್ಲೂಕು ಹಲವು ಐತಿಹಾಸಿಕ ಘಟನೆಗಳ ಜೊತೆ ಮುಖಾಮುಖಿಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಶ್ರೇಯವೂ ಇಲ್ಲಿನದ್ದು. ವಿವಿಧ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಚಾರದ ಕೊರತೆಯಿಂದ ಈ ಸ್ಥಳಗಳ ಮಾಹಿತಿ ತಾಲ್ಲೂಕಿನ ಜನರಿಗೇ ಗೊತ್ತಿಲ್ಲದಂತಾಗಿದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಿಲ್ಲ ಎಂಬ ಮಾತೂ ಕೇಳಿಬರುತ್ತಿವೆ. 

ತಾಲ್ಲೂಕಿನ ಹಾನಗಲ್ ಬೆಟ್ಟಗಳಲ್ಲಿ ಕ್ರಿ.ಪೂ, 3ನೇ ಶತಮಾನದಲ್ಲಿ ಜನವಸತಿ ಇದ್ದಿದ್ದಕ್ಕೆ ಕುರುಹು ಕಂಡುಬಂದಿದೆ. ಗುಹೆಗಳ ಕಲ್ಲಿನ ಮೇಲೆ ಚಿತ್ರಿಸಲಾಗಿರುವ ವರ್ಣಚಿತ್ರಗಳು, ಆಗಿನ ಕಾಲದ ಜನರ ಜೀವನಶೈಲಿಯನ್ನು ತಿಳಿಸುತ್ತವೆ. ಗುಂಡ್ಲೂರು ಸಮೀಪದ ಗುಡ್ಡದ ಗುಹೆಗಳಲ್ಲಿಯೂ ಶಿಲಾಯುಗ ಕಾಲದ ವರ್ಣಚಿತ್ರಗಳಿವೆ ಎಂದು ಸಾಹಿತಿ ಮರಿಕುಂಟೆ ತಿಪ್ಪೇಸ್ವಾಮಿ ಅವರು ‘ಮೊಳಕಾಲ್ಮುರು ದರ್ಶನ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ADVERTISEMENT

ತಾಲ್ಲೂಕಿನ ಮೂಲಕ ಹಾದುಹೋಗಿದ್ದ ರಾಜ್ಯ ಹೆದ್ದಾರಿ 65ನ್ನು ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 150 ‘ಎ’ ಆಗಿ ಮೇಲ್ದರ್ಜೆಗೇರಿಸಲಾಯಿತು. ನಿರ್ಮಾಣದ ಸಮಯದಲ್ಲಿ ದಾರಿ ಬದಿಯಲ್ಲಿದ್ದ ಐತಿಹಾಸಿಕ ಸ್ಥಳಗಳ ಮಾಹಿತಿ ಫಲಕಗಳನ್ನು ತೆರವು ಮಾಡಲಾಗಿತ್ತು. ಹೆದ್ದಾರಿ ಪ್ರಾಧಿಕಾರದವರು ಇದುವರೆಗೂ ಇವುಗಳನ್ನು ಮರು ಸ್ಥಾಪಿಸಿಲ್ಲ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಸಹ ಈ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ, ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರು ತೊಂದರೆ ಎದುರಿಸುತ್ತಿದ್ದಾರೆ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿರೂಪಾಕ್ಷಿ ಪೂಜಾರಹಳ್ಳಿ ದೂರಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಮಾಹಿತಿ ಇಲ್ಲದಿರುವುದು 
ಸ್ಥಳ ಮಾಹಿತಿ ಹಾಕಿದಲ್ಲಿ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗಲಿದೆ. ಪ್ರವಾಸೋದ್ಯಮ ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು
–ವಿರೂಪಾಕ್ಷಿ ಪೂಜಾರಹಳ್ಳಿ ಪ್ರಾಧ್ಯಾಪಕ ಹಂಪಿ ವಿ.ವಿ.
ಹೆದ್ದಾರಿಯಲ್ಲಿ ನಾಮಫಲಕ ಹಾಕಿಲ್ಲ. ಇದು ಗಮನಕ್ಕೆ ಬಂದಿದ್ದು 15ನೇ ಹಣಕಾಸು ಯೋಜನೆಯಲ್ಲಿ ಅವಕಾಶವಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ ಫಲಕಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುವುದು
–ಗಂಗಾಧರ್ ಕಣ್ಣೂರ್ ಪಿಡಿಒ ಅಶೋಕ ಸಿದ್ದಾಪುರ
ತಾಲ್ಲೂಕಿನ ಪ್ರವಾಸಿ ಸ್ಥಳಗಳು.. 
ಮೊಳಕಾಲ್ಮುರಿನ ಕೂಗೆಬಂಡೆ ಪಾಳೆಗಾರರ ಕೋಟೆ ಕೈಮಗ್ಗದಿಂದ ತಯಾರಿಸುವ ರೇಷ್ಮೆ ಸೀರೆಗಳು ನುಂಕಿಮಲೆ ಸಿದ್ದೇಶ್ವರ ಬೆಟ್ಟ ರಂಗಯ್ಯನ ದುರ್ಗ ಜಲಾಶಯ ಅಶೋಕ ಸಿದ್ದಾಪುರದ ಅಶೋಕ ಶಾಸನ ರಾಮಾಯಣ ಕಾಲದ ಬ್ರಹ್ಮಗಿರಿ ಬೆಟ್ಟ ದೇವಸಮುದ್ರದ ಪರಮೇಶ್ವರ ತಾತಾ ಚೌಕಿಮಠ ಕಾಡು ಸಿದ್ದಾಪುರದ ಏಕಸ್ಥಳ ಶವಸಂಸ್ಕಾರ ಸ್ಥಳ. ರೊಪ್ಪದ ಶಿಲಾಯುಗ ಕಾಲದ ಸಮಾಧಿಗಳು ಅಕ್ಕತಂಗಿ ದೇವಸ್ಥಾನ ಜೈನ ಬಸದಿಗಳು ಬಾಂಡ್ರಾವಿಯ ಅರಣ್ಯ ಇದೇ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಕೊಂಡ್ಲಹಳ್ಳಿಯ ಬಿಳಿನೀರು ಚಿಲುಮೆ.
ಫ್ಲೈ ಓವರ್‌ನಿಂದ ಸಮಸ್ಯೆ
‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಗ್ರಾಮಗಳಿಗೆ ಬೈಪಾಸ್ ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಯಾವ ಕಡೆಯಿಂದ ಪ್ರಾಚೀನ ಸ್ಥಳಗಳಿಗೆ ಹೋಗಬೇಕು ಎಂಬುದು ತಿಳಿಯದೇ ಪ್ರವಾಸಿಗರು ಗೊಂದಲಕ್ಕೀಡಾಗುತ್ತಾರೆ. ಅನೇಕ ಸಲ ನಿಗದಿತ ಸ್ಥಳವನ್ನು ದಾಟಿ ಮುಂದೆ ಹೋಗಿ ಅಲ್ಲಿ ವಿಚಾರಿಸಿಕೊಂಡು ವಾಪಸ್ ಬರುತ್ತಾರೆ. ಹೀಗಾಗುವುದನ್ನು ತಪ್ಪಿಸಬೇಕಾದರೆ ಸ್ಮಾರಕಗಳು ಇರುವ ಸ್ಥಳಗಳನ್ನು ಸಂಪರ್ಕಿಸುವ ಕಡೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಅಧಿಕಾರಿಗಳು ಜಿಲ್ಲಾಡಳಿತ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದು ಇತಿಹಾಸ ಪ್ರಿಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.