ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 3ರಿಂದ 10ರವರೆಗೆ ನಡೆಯಲಿದೆ. ರಥೋತ್ಸವದ ದಿನ ಮುಕ್ತಿಬಾವುಟದ ಹರಾಜು ಕೂಗಲು ಭಕ್ತರು ಮೊದಲೇ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮವೊಂದನ್ನು ರೂಪಿಸಲಾಗಿದೆ.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಯಕನಹಟ್ಟಿ ಜಾತ್ರಾ ಮಹೋತ್ಸವದ ಅಂಗವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
‘ಮಾರ್ಚ್ 10 ರಂದು ದೊಡ್ಡ ರಥೋತ್ಸವ ಜರುಗಲಿದೆ. ರಥದ ಮುಕ್ತಿಬಾವುಟವನ್ನು ಹರಾಜು ಪಡೆಯಲು ಇಚ್ಛಿಸುವ ಭಕ್ತರು ಮೊದಲೇ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಸಂದರ್ಭದಲ್ಲಿ ಬ್ಯಾಂಕ್ ಚೆಕ್‍ಬುಕ್ ಹಾಳೆಯೊಂದನ್ನು ದೇವಸ್ಥಾನದ ಸಮಿತಿಗೆ ನೀಡಬೇಕು. ಮುಕ್ತಿಬಾವುಟವನ್ನು ಹರಾಜಿನಲ್ಲಿ ಕೂಗಿದವರು ಮೂರು ತಿಂಗಳ ಒಳಗಾಗಿ ಹಣ ಸಂದಾಯ ಮಾಡಬೇಕು’ ಎಂಬ ತೀರ್ಮಾನಕ್ಕೆ ಬರಲಾಯಿತು.
ಪ್ರಾಣಿ ಬಲಿ ನಿಷೇಧ:
‘ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿಯಂತಹ ಆಚರಣೆಗಳನ್ನು ನಿಷೇಧಿಸಲಾಗಿದೆ. ಪೊಲೀಸ್, ಪಟ್ಟಣ ಪಂಚಾಯತಿ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸನ್ನದ್ದವಾಗಿದ್ದು, ಪ್ರಾಣಿಬಲಿ ತಡೆಯಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಸೂಚಿಸಿದರು.
‘ನಾಯಕನಹಟ್ಟಿ ಪಟ್ಟಣದ ಮೂರು ಕಿ.ಮೀ. ವ್ಯಾಪ್ತಿಯ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ಹಾಗೂ ಸಾಗಾಣಿಕೆ ತಡೆಗಟ್ಟಬೇಕು. ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ಈ ಕುರಿತು ಜಾಗೃತಿ ವಹಿಸಬೇಕು’ ಎಂದರು.
ಮೂಲಸೌಲಭ್ಯಕ್ಕೆ ಒತ್ತು:
‘ಜಾತ್ರಾ ಮಹೋತ್ಸವಕ್ಕೆ ಆಂಧ್ರಪ್ರದೇಶ, ತೆಲಂಗಾಣ ಸೇರಿ ರಾಜ್ಯದ ವಿವಿಧಡೆಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ, ಸಮರ್ಪಕ ವಿದ್ಯುತ್, ಬಂದೋಬಸ್ತ್, ಸಾರಿಗೆ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.
‘ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಕುಡಿಯವ ನೀರು ಸರಬರಾಜಿಗೆ 40 ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. 6 ಕಡೆಗಳಲ್ಲಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ನೀರು ಸಾಗಣೆ ನಡೆಸುವ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಿ, ನೈರ್ಮಲೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಸಭೆಗೆ ಮಾಹಿತಿ ನೀಡಿದರು.
5 ಸ್ಥಳದಲ್ಲಿ ಶೌಚಾಲಯ:
‘ಪಟ್ಟಣದ 5 ಸ್ಥಳದಲ್ಲಿ ತಾತ್ಕಾಲಿಕವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಜಾತ್ರಾ ಮಹೋತ್ಸವ ಜರುಗುವ ದಿನ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ನೀಡಬೇಕು’ ಎಂದು ಟಿ.ಜವರೇಗೌಡ ಸೂಚನೆ ನೀಡಿದರು.
‘ಜಾತ್ರ ಮಹೋತ್ಸವದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ 152 ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದೆ. 16 ವೈದ್ಯರನ್ನು ಕರ್ತವ್ಯಕ್ಕೆ ನಿರ್ವಹಿಸಲಿದ್ದಾರೆ. 4 ಕಡೆ ತಾತ್ಕಾಲಿಕ ಕ್ಲಿನಿಕ್‍ಗಳನ್ನು ತೆರಯಲಾಗುವುದು. ಆಹಾರ ಹಾಗೂ ನೈರ್ಮಲ್ಯ ಮೇಲ್ವಿಚಾರಣೆಗಾಗಿ 8 ತಂಡ ರಚಿಸಲಾಗಿದೆ. ತುರ್ತು ಸೇವೆಗಳಿಗಾಗಿ 4 ಆಂಬ್ಯುಲೆನ್ಸ್ ಸಜ್ಜುಗೊಳಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ರಂಗನಾಥ್ ಸಭೆಗೆ ಮಾಹಿತಿ ನೀಡಿದರು.
ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು
ಜಾತ್ರಾ ಮಹೋತ್ಸವದ ಬಂದೋಬಸ್ತ್‌ಗೆ 2,550 ಪೊಲೀಸರನ್ನು ನಿಯೋಜಿಸಲಾಗುವುದು. ಅಹಿತಕರ ಘಟನೆ, ಕಳವು ತಡೆಯಲು ಪಟ್ಟಣದ 30 ಕಡೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ಸಭೆಗೆ ಮಾಹಿತಿ ನೀಡಿದರು.
‘ಪಟ್ಟಣದ ಮೂರು ಸ್ಥಳದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತಿದೆ. 22 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ನಾಯಕನಹಟ್ಟಿ ಸಂಪರ್ಕಿಸುವ ಏಳು ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಟೊ ಪೂರ್ವನಿಗದಿತ ದರಪಟ್ಟಿ ನೀಡಲು ಕ್ರಮಕೈಗೊಳ್ಳಲಾಗುವುದು’ ಎಂದು ವಿವರಿಸಿದರು.
ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ, ನಾಯಕನಹಟ್ಟಿ ಪಟ್ಟಣ ಪಂಚಾಯತಿ ಅಧಿಕಾರಿ ಲೀಲಾವತಿ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.