ಚಿತ್ರದುರ್ಗ: ‘ನಗರದ ಹೊರ ವಲಯದಲ್ಲಿರುವ ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗಿದೆ. ಇದೇ ವರ್ಷ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.
ತಿಮ್ಮಣ್ಣ ನಾಯಕನ ಕೆರೆ ಏರಿಯ ಎಡಭಾಗದಲ್ಲಿ ಪಾತ್ ವೇ ಮತ್ತು ಆಲಂಕಾರಿಕ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಕೆರೆಗೆ ತೆರಳಲು ಇರುವ ಮಣ್ಣಿನ ದಾರಿಗೆ ಶೀಘ್ರ ಡಾಂಬರ್ ಹಾಕಲಾಗುವುದು. ನಗರದಿಂದ ಕೆರೆಯವರೆಗೂ ಸುಂದರ ರಸ್ತೆ ನಿರ್ಮಾಣ ಮಾಡಲಾಗುವುದು. ಕೆರೆಗೆ ಪ್ರವಾಸಿ ತಾಣದ ರೂಪ ಕೊಡುವ ಎಲ್ಲಾ ಕಾಮಗಾರಿ ಕೈಗೊಳ್ಳಲಾಗುವುದು. ಕೆರೆಯ ಆವರಣದಲ್ಲಿ ನಿತ್ಯ ನೂರಾರು ಜನರು ವಾಯುವಿಹಾರ ಮಾಡುತ್ತಾರೆ. ಕೆರೆ ಪರಿಸರದಲ್ಲಿರುವ ಚೌಡೇಶ್ವರಿ ಹಾಗೂ ಆಂಜನೇಯ ದೇವಾಲಯಕ್ಕೆ ಭಕ್ತರು ಬರುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಹೇಳಿದರು.
‘ತಿಮ್ಮಣ್ಣನಾಯಕನ ಕೆರೆ ಪರಿಸರದಲ್ಲಿ ಟ್ರೆಕ್ಕಿಂಗ್ ಮಾಡಲು ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲವಾಗುವಂತಹ ವಾತಾವರಣ ರೂಪಿಸಲಾಗುವುದು. ಕೆರೆಯ ಪರಿಸರದಲ್ಲಿ ಕೆಲವರು ಕುಡಿತ ಮುಂತಾದ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಪೊಲೀಸರ ಜೊತೆ ಮಾತನಾಡಿ ಕೆರೆ ಪರಿಸರವನ್ನು ಕಾಪಾಡುವಂತೆ ಸೂಚಿಸಲಾಗುವುದು. ಕೆರೆಯಲ್ಲಿ ನೀರು ತುಂಬುವಂತೆ ಮಾಡಲು ಹೂಳೆತ್ತುವ ಕಾಮಗಾರಿಯನ್ನೂ ಆರಂಭಿಸಲಾಗುವುದು. ಬೋಟಿಂಗ್ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
‘ಸಾರ್ವಜನಿಕ ಅನುಕೂಲಕ್ಕಾಗಿ ನಗರದ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಉದ್ಯಾನದಲ್ಲಿ ಮಕ್ಕಳ ಆಟಿಕೆ ವಸ್ತುಗಳನ್ನು ಅಳವಡಿಸಲಾಗುವುದು. ಜೊತೆಗೆ ಹಿರಿಯ ನಾಗರಿಕರು, ಮಹಿಳೆಯರು ವ್ಯಾಯಾಮ ಮಾಡಲು ಜಿಮ್ ವಸ್ತುಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಪೌರಾಯುಕ್ತೆ ಎಂ.ರೇಣುಕಾ, ಮುಖಂಡ ಆಂಜಿನಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.