ADVERTISEMENT

ಅವೈಜ್ಞಾನಿಕ ಕಾಮಗಾರಿ: ಮಾಜಿ ಶಾಸಕ ಆಕ್ರೋಶ

ನಾಯಕನಹಟ್ಟಿ: ಚಿಕ್ಕಕೆರೆಯ ಏರಿ ಮೇಲೆ ತುಂಗಭದ್ರಾ ಹಿನ್ನೀರಿನ ಪೈಪ್‌ಲೈನ್ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 1:50 IST
Last Updated 26 ಸೆಪ್ಟೆಂಬರ್ 2020, 1:50 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಏರಿಯ ಮೇಲೆ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಯನ್ನು ಶುಕ್ರವಾರ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವೀಕ್ಷಿಸಿದರು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಏರಿಯ ಮೇಲೆ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಯನ್ನು ಶುಕ್ರವಾರ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವೀಕ್ಷಿಸಿದರು.   

ನಾಯಕನಹಟ್ಟಿ: ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆ ಏರಿಯ ಮೇಲೆ ತುಂಗಭದ್ರಾ ಹಿನ್ನೀರಿನ ಪೈಪ್‌ಲೈನ್ ಕಾಮಗಾರಿಗೆ ಗುಂಡಿ ತೆಗೆದಿರುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಏರಿಯ ಮೇಲೆ ತುಂಗಭದ್ರಾ ಹಿನ್ನೀರಿನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸಿರುವ ಪೈಪ್‌ಲೈನ್ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆ ಸೇರಿದಂತೆ ಮಧ್ಯಕರ್ನಾಟಕದಲ್ಲಿ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಎಂದರೆ ವಿಶೇಷವಾದ ಭಕ್ತಿ, ಗೌರವವಿದೆ. ಅವರು ನಾಯಕನಹಟ್ಟಿ ಹೋಬಳಿಯಲ್ಲಿ 16ನೇ ಶತಮಾನದಲ್ಲಿ 5 ಬೃಹತ್ ಕೆರೆಗಳನ್ನು ಕಟ್ಟಿಸಿದರು ಎಂಬ ಪ್ರತೀತಿ ಇದೆ. ಅವುಗಳಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆಯು ಒಂದಾಗಿದೆ. ಈ ಚಿಕ್ಕಕೆರೆಯ ಏರಿಯು ಪ್ರಸ್ತುತ ದಿನಗಳಲ್ಲಿ ಶಿಥಿಲಾವಸ್ಥೆ ತಲುಪಿದೆ. ಶಿಥಿಲಗೊಂಡ ಕೆರೆ ಏರಿಯ ಮೇಲೆಯೇ ತುಂಗಭದ್ರಾ ಹಿನ್ನೀರಿನಿಂದ ಬಹುಗ್ರಾಮ ಕುಡಿಯುವ ನೀರಿಗಾಗಿ ಬೃಹತ್ ಪೈಪ್‌ಲೈನ್ ಅಳವಡಿಸುತ್ತಿರುವುದು ಅವೈಜ್ಞಾನಿಕ ಕಾಮಗಾರಿಗೆ ಸಾಕ್ಷಿಯಂತಿದೆ’ ಎಂದು ಹೇಳಿದರು.

ADVERTISEMENT

‘ಕೆರೆ ಏರಿಯ ಮೇಲೆ 5 ಅಡಿ ಆಳದಷ್ಟು ಗುಂಡಿ ಅಗೆದು ಪೈಪ್‌ಲೈನ್ ಅಳವಡಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಯ ಬೃಹತ್‌ ವಾಹನಗಳ ಒಡಾಟದಿಂದ ಪೈಪ್‌ಲೈನ್ ಸೋರುವಿಕೆ ಹಾಗೂ ಇತರೆ ಕಾರಣಗಳಿಂದ ಕೆರೆಯ ಏರಿಯ ಮೇಲೆ ತೇವಾಂಶ ಹೆಚ್ಚಾಗಿ ಕೆರೆ ಏರಿಯು ಕುಸಿಯುವ ಸಂಭವವಿರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಾಗಾಗಿ, ಸಂಬಂಧಪಟ್ಟ ಪೈಪ್‌ಲೈನ್ ಕಾಮಗಾರಿ ಗುತ್ತಿಗೆದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ಗಳು ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ಪರ್ಯಾಯ ಮಾರ್ಗದಲ್ಲಿ ಪೈಪ್‌ಲೈನ್ ಅಳವಡಿಸಬೇಕು ಮತ್ತು ಏರಿಯ ಮೇಲೆ 500 ಮೀಟರ್ ಅಗೆದಿರುವ ಗುಂಡಿಯನ್ನು ಮುಚ್ಚಿ ಸುಸಜ್ಜಿತವಾಗಿ ಏರಿಯನ್ನು ದುರಸ್ತಿಗೊಳಿಸಿಕೊಡಬೇಕು. ಇಲ್ಲವಾದರೆ ಈ ಕಾಮಗಾರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಟಿ.ಬಸಣ್ಣ, ಮಹಮ್ಮದ್‌ ಮನ್ಸೂರ್, ಭಾರತೀಯ ಕಿಸಾನ್ ಸಂಘದ ತಾಲ್ಲೂಕುಅಧ್ಯಕ್ಷ ಕೆ.ಎಂ.ಪಂಚಾಕ್ಷರಿಸ್ವಾಮಿ, ಗ್ರಾಮಸ್ಥರಾದ ಆರ್.ತಿಪ್ಪೇಸ್ವಾಮಿ, ಟಿ.ರುದ್ರಮುನಿ, ದಳವಾಯಿ ರುದ್ರಮುನಿ, ಸುನಿಲ್, ತಿಪ್ಪೇಸ್ವಾಮಿ, ಮಾರ್ಕಂಡೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.