ADVERTISEMENT

ಮ್ಯಾಸಬೇಡರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಜನರ ಜಾಗೃತಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 4:20 IST
Last Updated 14 ನವೆಂಬರ್ 2022, 4:20 IST
ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರು ಮ್ಯಾಸಬೇಡ ಬುಡಕಟ್ಟು ಜನರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರು ಮ್ಯಾಸಬೇಡ ಬುಡಕಟ್ಟು ಜನರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   

ನಾಯಕನಹಟ್ಟಿ: ಅಪ್ಪಟ ಬುಡಕಟ್ಟು ಆಚಾರ, ವಿಚಾರ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಮ್ಯಾಸಬೇಡ (ಮ್ಯಾಸನಾಯಕ)ರನ್ನು ಹಿಂದುಳಿದ ವರ್ಗಗಳ ಜಾತಿಪಟ್ಟಿಯಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆಗ್ರಹಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಮ್ಯಾಸಬೇಡ ಬುಡಕಟ್ಟು ಜನರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.

ಎಲ್.ಜಿ. ಹಾವನೂರರು 1975ರಲ್ಲಿ ಮ್ಯಾಸಬೇಡರನ್ನು ಹಿಂದುಳಿದ ಜಾತಿಪಟ್ಟಿಗೆ ಸೇರಿಸಿ ನಾಯಕ, ಬೇಡ, ನಾಯ್ಕ, ವಾಲ್ಮೀಕಿ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ನಮೂದಿಸಿ ಸರ್ಕಾರಕ್ಕೆ ವರದಿ ನೀಡಿ ಮ್ಯಾಸಬೇಡ ನಾಯಕರಿಗೆ ಅನ್ಯಾಯ ಮಾಡಿರುತ್ತಾರೆ. ಆದರೆ, ಪಾಳೆಯಗಾರರ ಶಾಸನಗಳಲ್ಲಿ, ಬ್ರಿಟಿಷರ ದಾಖಲಾತಿಗಳಲ್ಲಿ ಮತ್ತು ಜನಗಣತಿ ವರದಿಯಲ್ಲಿ ಮ್ಯಾಸ ನಾಯಕ ಪಂಗಡವನ್ನು 1971ರವರೆಗೂ ಮ್ಯಾಸನಾಯಕ, ಮ್ಯಾಸಬೇಡ ಎಂದೇ ಜಾತಿಪ್ರಮಾಣಪತ್ರದಲ್ಲಿ ನಮೂದಿಸಲಾಗಿತ್ತು. 2011ರಲ್ಲಿ ಮ್ಯಾಸನಾಯಕ ಪದವನ್ನು ಬಿ.ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ, ಪ್ರಸನ್ನಾನಂದಪುರಿ ಸ್ವಾಮಿಜಿ ಅವರು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ ಮ್ಯಾಸ ನಾಯಕರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ADVERTISEMENT

ಮ್ಯಾಸನಾಯಕ ಬುಡಕಟ್ಟು ಜನಾಂಗಕ್ಕೆ ಅನ್ಯಾಯವೆಸಗಿರುವ ಬಿ. ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶಕ್ಕೆ ಮ್ಯಾಸನಾಯಕರು ಹೋಗಬಾರದು. ಮೊಳಕಾಲ್ಮುರು ತಾಲ್ಲೂಕನ್ನು ಹಾಗೂ ಮ್ಯಾಸನಾಯಕ ಬುಡಕಟ್ಟು ಜನರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲೇ ಉಳಿಸಬೇಕು. ಹಾಗೂ ಪ್ರತ್ಯೇಕವಾಗಿ ಮ್ಯಾಸಬೇಡ ಬುಡಕಟ್ಟು ನಿಗಮವನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಡಾ.ಗೆರೆಗಲ್‌ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಪಿ. ಮಲ್ಲೇಶ, ಮಂಜುನಾಥ, ಕನ್ನಯ್ಯ, ದಳವಾಯಿಬೋರಯ್ಯ, ಶಿವಲಿಂಗಪ್ಪ, ಲೋಕೇಶ, ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.