ವಾಣಿವಿಲಾಸ ಜಲಾಶಯದ ಕೋಡಿ ಬಿದ್ದಾಗ ಹಸಿರು ಬೆಟ್ಟಗಳ ಇಳಿಜಾರಿನಲ್ಲಿ ನೀರು ಹರಿಯುವ ದೃಶ್ಯ (ಸಂಗ್ರಹಚಿತ್ರ).
ಹಿರಿಯೂರು: 3ನೇ ಬಾರಿಗೆ ಕೋಡಿ ಬೀಳುವ ಕ್ಷಣಕ್ಕೆ ವಾಣಿವಿಲಾಸ ಸಾಗರ ಜಲಾಶಯ ಸಾಕ್ಷಿಯಾಗಲು ದಿನಗಣನೆ ಆರಂಭವಾಗಿದೆ. ಕೋಡಿ ಬಿದ್ದು ಹೊರ ಹರಿಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಆದರೆ ಜಲಾಶಯದ ಬಳಿ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಸೇರಿ ಮೂಲ ಸೌಲಭ್ಯ ಒದಗಿಸುವುದೇ ದೊಡ್ಡ ಸವಾಲಾಗಿದೆ.
2022ರ ಸೆ.2ರಂದು ಜಲಾಶಯ ಇತಿಹಾಸದಲ್ಲೇ 2ನೇ ಬಾರಿಗೆ ಕೋಡಿ ಬಿದ್ದಾಗ ಅಪಾರ ಸಂಖ್ಯೆಯ ಜನರು ವೀಕ್ಷಿಸಿದ್ದರು. ಈ ಬಾರಿಯೂ ಲಕ್ಷಾಂತರ ಜನ ಭೇಟಿ ನೀಡುವ ಸಾಧ್ಯತೆ ಇದೆ. ಮಂಗಳವಾರ ನೀರಿನ ಮಟ್ಟ 128.95 ಅಡಿ ದಾಖಲಾಗಿತ್ತು. ಪೂರ್ಣಮಟ್ಟ 130 ಇದ್ದು ಭರ್ತಿಗೆ 1.05 ಅಡಿ ಮಾತ್ರ ಬಾಕಿ ಇದೆ. ಸಂಕ್ರಾಂತಿ ವೇಳೆಗೆ ಕೋಡಿ ಬೀಳುವ ಎಲ್ಲ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಲಾಶಯವ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ.
ಕೋಡಿ ಬೀಳುವುದನ್ನು ಕಣ್ತುಂಬಿಕೊಳ್ಳಲು ಬರುವ ಸಹಸ್ರಾರು ಸಂಖ್ಯೆಯ ಪ್ರವಾಸಿಗರ ವಾಹನಗಳಿಗೆ ಎರಡೂ ಬದಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡುವುದೇ ಸವಾಲಾಗಿದೆ. ಕೋಡಿ ಬಿದ್ದಲ್ಲಿ ನೀರು ಹರಿದು ಹೋಗಲು ಮೇಲ್ಸೇತುವೆ ಇಲ್ಲದ್ದರಿಂದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಹೀಗಾಗಿ ವಾಣಿವಿಲಾಸಪುರದ ಮೂಲಕ ಹೊಸದುರ್ಗಕ್ಕೆ ಹೋಗುವ ರಸ್ತೆ ಬಂದ್ ಆಗಲಿದೆ. ಬಹಳಷ್ಟು ಪ್ರವಾಸಿಗರು ಕೋಡಿ ಹರಿಯುವ ನೀರನ್ನು ಹತ್ತಿರದಿಂದ ನೋಡಬೇಕೆಂಬ ಉದ್ದೇಶದಿಂದ ಭರಮಗಿರಿ ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ಬೈಪಾಸ್ ಮೂಲಕ ಹೊಸದುರ್ಗದ ಕಡೆಗೆ ಹೋಗಿ ಆರನಕಣಿವೆ ರಂಗನಾಥಸ್ವಾಮಿ ದೇಗುಲದ ಕೆಳಭಾಗದಲ್ಲಿರುವ ಕೋಡಿಯ ಹತ್ತಿರ ಹೋಗುತ್ತಾರೆ.
ವಾಣಿವಿಲಾಸಪುರ–ಹೊಸದುರ್ಗ ರಸ್ತೆ ಕಿರಿದಾಗಿರುವ ಕಾರಣ ಎರಡು ದೊಡ್ಡ ವಾಹನಗಳು ಎದುರಾದರೆ ಸ್ಥಳ ಬಿಟ್ಟುಕೊಡಲು ರಸ್ತೆಯಿಂದ ಕೆಳಗೆ ಇಳಿಯಲೇಬೇಕು. ಪ್ರವಾಸಿಗರು ರಸ್ತೆ ಬದಿಯಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ಹೋದರೆ ವಾಹನ ಚಾಲಕರ ಪರದಾಟ ಹೇಳತೀರದು. ವಾಹನ ನಿಲುಗಡೆ ಸಮಸ್ಯೆಯನ್ನು ಪರಿಹರಿಸಲು ವಿಶ್ವೇಶ್ವರಯ್ಯ ನೀರಾವರಿ ನಿಗಮ, ಲೋಕೋಪಯೋಗಿ ಅಥವಾ ಪ್ರವಾಸೋದ್ಯಮ ಇಲಾಖೆಯವರು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಪ್ರವಾಸಿಗರಿಗೆ ವಸತಿ ಸಮಸ್ಯೆ ಕಾಡಲಿದೆ. ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿದ ಎರಡು ಪ್ರವಾಸಿ ಮಂದಿರಗಳಿದ್ದು, ಆರೇಳು ಕೊಠಡಿಗಳು ಮಾತ್ರ ಇವೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ವಸತಿ ಗೃಹಗಳನ್ನು ಇನ್ನೂ ನಿರ್ಮಿತಿ ಕೇಂದ್ರದವರು ಹಸ್ತಾಂತರಿಸದ ಕಾರಣಕ್ಕೆ ಐದಾರು ವರ್ಷದಿಂದ ಅವೆಲ್ಲ ಇದ್ದೂ ಇಲ್ಲದಂತಾಗಿವೆ. ಖಾಸಗಿಯವರಿಗೆ ಸೇರಿದ ಒಂದೇ ಒಂದು ವಸತಿ ಗೃಹವಿದ್ದು, ಅಲ್ಲೂ ಕೊಠಡಿಗಳ ಕೊರತೆ ಇದೆ.
ಊಟ–ಉಪಾಹಾರಕ್ಕೆ ವಿ.ವಿ. ಪುರ ವೃತ್ತದಲ್ಲಿರುವ ಐದಾರು ಸಣ್ಣ ಹೋಟೆಲ್‌ಗಳೇ ಆಧಾರ. ವಿ.ವಿ. ಸಾಗರದ ಮೀನಿನ ರುಚಿ ಸವಿದವರೇ ಬಲ್ಲರು. ಒಮ್ಮೆಗೆ 50ರಿಂದ 100 ಪ್ರವಾಸಿಗರು ಕುಳಿತುಕೊಳ್ಳುವಂತಹ ಹೋಟೆಲ್‌ವೊಂದರ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.
2014ರಲ್ಲಿ ಆಗಿನ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರು ₹ 5 ಕೋಟಿ ವೆಚ್ಚದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. 11 ವರ್ಷ ಗತಿಸಿದರೂ ಕಾಮಗಾರಿ ಹೊಣೆ ಹೊತ್ತಿದ್ದ ಚಿತ್ರದುರ್ಗ ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸದ ಕಾರಣ ಇಡೀ ಆವರಣದ ತುಂಬ ಗಿಡಗಂಟಿಗಳು ಬೆಳೆದಿವೆ.
ಹೈಟೆಕ್ ಶೌಚಾಲಯ ಹೊರಗೆ ನೋಡಲು ಮಾತ್ರ ಚಂದವಿದ್ದು, ಪ್ರವಾಸಿಗರಿಗೆ ಲಭ್ಯವಿಲ್ಲ. ಪಾದಚಾರಿ ರಸ್ತೆಗಳಿಗೆ ಹಾಕಿರುವ ಟೈಲ್ಸ್‌ಗಳು ಹಾಳಾಗಿವೆ. ಒಂದೆರಡು ವಾರ ಮಳೆ ಬೀಳದಿದ್ದರೆ ಇಡೀ ಆವರಣ ಪಾಳು ಭೂಮಿಯಂತೆ ಕಾಣುತ್ತದೆ. ಅರಣ್ಯ ಇಲಾಖೆಗೆ ಸೇರಿರುವ ಪ್ರಕೃತಿವನ ಹಾಗೂ ಪ್ರವಾಸೋದ್ಯಮ ಇಲಾಖೆಯ ಮತ್ತೊಂದು ವನವನ್ನು ಅಭಿವೃದ್ಧಿ ಪಡಿಸಿದಲ್ಲಿ ಒಂದು ದಿನದ ಪ್ರವಾಸಕ್ಕೆ ವಾಣಿ ವಿಲಾಸ ಅಣೆಕಟ್ಟೆ ಪ್ರದೇಶ ಅತ್ಯಂತ ಸೂಕ್ತವಾಗಿದೆ.ಬರಡಾದ ಪ್ರಕೃತಿ ವಿಹಾರವನ
ಕೆ.ಎಚ್. ರಂಗನಾಥ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿ ಸುಂದರವಾದ ‘ಪ್ರಕೃತಿ ವಿಹಾರ ವನ’ ಉದ್ಘಾಟನೆಯಾಗಿತ್ತು.
ಅರಣ್ಯ ಇಲಾಖೆ ನಿರ್ಮಿಸಿದ್ದ ಈ ವನ ಪ್ರವಾಸಿಗರ ಪಾಲಿಗೆ ತಂಪೆರೆಯುವ ತಾಣವಾಗಿತ್ತು. ಅಶೋಕವನ, ಮಾದರಿ ಗ್ರಾಮ, ನಂದನವನ, ಗುಲಾಬಿ ತೋಟ, ಜಪಾನೀಸ್ ಉದ್ಯಾನ, ಬೃಹತ್ ಪಂಚಾಯತ್ ವನ, ಸಪ್ತಸ್ವರವನ, ತ್ರಿಫಲವನ, ಗಾರ್ಡನ್ ಆಫ್ ಹಾರ್ಮೊನಿ, ತಾವರೆ, ನೆಲ್ಲಿ, ಔಷಧಿ ಗಿಡಗಳ ವನ, ಪುಟಾಣಿ ಮಕ್ಕಳ ಆಟಿಕೆಯ ವನ ಎಲ್ಲವೂ ಒಂದನ್ನೊಂದು ಮೀರಿಸುವಂತೆ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದ್ದವು. ಈಗ ಉದ್ಯಾನ ಒಣಗಿದ ಹುಲ್ಲುಗಾಲಿನಂತೆ ಆಗಿದೆ.
ಬರಡಾದ ಪ್ರಕೃತಿ ವಿಹಾರವನ
ಕೆ.ಎಚ್. ರಂಗನಾಥ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿ ಸುಂದರವಾದ ‘ಪ್ರಕೃತಿ ವಿಹಾರ ವನ’ ಉದ್ಘಾಟನೆಯಾಗಿತ್ತು.
ಅರಣ್ಯ ಇಲಾಖೆ ನಿರ್ಮಿಸಿದ್ದ ಈ ವನ ಪ್ರವಾಸಿಗರ ಪಾಲಿಗೆ ತಂಪೆರೆಯುವ ತಾಣವಾಗಿತ್ತು. ಅಶೋಕವನ, ಮಾದರಿ ಗ್ರಾಮ, ನಂದನವನ, ಗುಲಾಬಿ ತೋಟ, ಜಪಾನೀಸ್ ಉದ್ಯಾನ, ಬೃಹತ್ ಪಂಚಾಯತ್ ವನ, ಸಪ್ತಸ್ವರವನ, ತ್ರಿಫಲವನ, ಗಾರ್ಡನ್ ಆಫ್ ಹಾರ್ಮೊನಿ, ತಾವರೆ, ನೆಲ್ಲಿ, ಔಷಧಿ ಗಿಡಗಳ ವನ, ಪುಟಾಣಿ ಮಕ್ಕಳ ಆಟಿಕೆಯ ವನ ಎಲ್ಲವೂ ಒಂದನ್ನೊಂದು ಮೀರಿಸುವಂತೆ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದ್ದವು. ಈಗ ಉದ್ಯಾನ ಒಣಗಿದ ಹುಲ್ಲುಗಾಲಿನಂತೆ ಆಗಿದೆ.
ಜಲಾಶಯ ಭರ್ತಿಯಾಗುತ್ತಿದ್ದು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುವುದು. ಜಲಾಶಯದ ಬಳಿ ಭದ್ರತೆಗೆ ಪ್ರಮುಖ ಆದ್ಯತೆ ನೀಡಲಾಗುವುದುಚಂದ್ರಪ್ಪ, ಇಇ, ವಿಶ್ವೇಶ್ವರಯ್ಯ ನೀರಾವರಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.