ADVERTISEMENT

ರಂಗೇರುತ್ತಿದೆ ಹಳ್ಳಿ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:53 IST
Last Updated 14 ಡಿಸೆಂಬರ್ 2020, 4:53 IST
ಹೊಸದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರವೊಂದರ ಆಲದ ಮರದ ಕೆಳಗೆ ಚುನಾವಣೆ ಚರ್ಚೆಯಲ್ಲಿ ತೊಡಗಿರುವ ಜನರು.
ಹೊಸದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರವೊಂದರ ಆಲದ ಮರದ ಕೆಳಗೆ ಚುನಾವಣೆ ಚರ್ಚೆಯಲ್ಲಿ ತೊಡಗಿರುವ ಜನರು.   

ಹೊಸದುರ್ಗ: ತಾಲ್ಲೂಕಿನ 33 ಗ್ರಾಮ ಪಂಚಾಯಿತಿಯ 533 ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಕಾವು ದಿನ ಕಳೆದಂತೆ ರಂಗೇರುತ್ತಿದೆ.

ತಾಲ್ಲೂಕಿನಾದ್ಯಂತ 1,846 ನಾಮಪತ್ರ ಸಲ್ಲಿಕೆಯಾಗಿದ್ದು, 34 ನಾಮಪತ್ರಗಳು ತಿರಸ್ಕೃತಗೊಂಡಿವೆ. ಕಣದಲ್ಲಿ ಉಳಿದಿರುವ ಯಾವ ಅಭ್ಯರ್ಥಿ ಯ ನಾಮಪತ್ರ ವಾಪಸ್ ತೆಗೆಸಬೇಕು ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಗೆಲುವಿಗೆ ಕಸರತ್ತು ಶುರುವಾಗಿದೆ. ಧರ್ಮ, ಜಾತಿ, ಕೋಮು ಆಧಾರಿತ ಸಭೆಗಳು ದೇವಸ್ಥಾನ, ಊರು ಹೊರಗಿನ ವಿಶಾಲ ಪ್ರದೇಶದಲ್ಲಿ ಹೆಚ್ಚಾಗುತ್ತಿವೆ. ಹಳ್ಳಿ ಭಾಗದ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಬಳಿ ಜನಜಂಗುಳಿ ಹೆಚ್ಚಾಗುತ್ತಿದೆ. ಹಳ್ಳಿ ರಾಜಕಾರಣವನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಮನೆ, ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.

ADVERTISEMENT

ಡಾಬಾಗಳಲ್ಲಿ ಸೇರಿ ಬಾಡೂಟ ಸವಿಯುತ್ತ ರಾಜಕೀಯ ಚರ್ಚೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಭ್ಯರ್ಥಿ ಪರ ತಂಡೋಪತಂಡವಾಗಿ ಬೆಂಬಲಿಗರು ಬರುತ್ತಿರುವುದರಿಂದ ಡಾಬಾಗಳು ಭರ್ತಿಯಾಗುತ್ತಿವೆ.ಮದ್ಯ ಸೇವಿಸಿ ಬಾಡೂಟ ಸವಿದು ತಡರಾತ್ರಿವರೆಗೂ ಗೆಲುವಿನ ತಂತ್ರ ರೂಪಿಸುತ್ತಿದ್ದಾರೆ.

ಅವಿರೋಧ ಆಯ್ಕೆ ಸಾಧ್ಯತೆ

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಗೂಳಿಹಳ್ಳಿ, ಆಲಘಟ್ಟ ಲಂಬಾಣಿಹಟ್ಟಿ, ಮಧುರೆ ಬ್ರಹ್ಮವಿದ್ಯಾನಗರ, ಬಾಗೂರು ಕೋಡಿಹಳ್ಳಿ, ಮಾದೇಹಳ್ಳಿ ಮತಕ್ಷೇತ್ರಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿವೆ. ಈ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.