ADVERTISEMENT

ಹೊಸದುರ್ಗ: ಆಗಸ್ಟ್‌ 1ರಿಂದ ಮತ್ತೆ ಕಲ್ಯಾಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 3:55 IST
Last Updated 29 ಜುಲೈ 2022, 3:55 IST
ಮತ್ತೆ ಕಲ್ಯಾಣ
ಮತ್ತೆ ಕಲ್ಯಾಣ   

ಹೊಸದುರ್ಗ: ಆಗಸ್ಟ್‌ 1ರಿಂದ 29ರ ವರೆಗೆ ಹಾಸನ ಜಿಲ್ಲೆಯ ಅರಸೀಕೆರೆ ಹಾಗೂ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶರಣರ ವಿಚಾರಗಳ ಪ್ರಸಾರ, ಪ್ರಚಾರ, ಅನುಷ್ಠಾನಕ್ಕಾಗಿ ‘ಸರ್ವಶರಣ ಸಮ್ಮೇಳನ’, ‘ಮನೆಯಲ್ಲಿ ಮಹಾಮನೆ’ ಹೆಸರಿನಲ್ಲಿ ಪ್ರಾರಂಭವಾದ ಕಲ್ಯಾಣೋತ್ಸವ ಶ್ರಾವಣ ಸಂಜೆಯಾಗಿ ಬೆಳೆದು ಪ್ರಸ್ತುತ ‘ಮತ್ತೆ ಕಲ್ಯಾಣ’ವಾಗಿ ವಿಕಾಸ ಹೊಂದುತ್ತಾ, ಜನಮಾನಸದಲ್ಲಿ ನೆಲೆಸಿದೆ ಎಂದು ಸಾಣೇಹಳ್ಳಿಯ ವಚನ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಕಾರಣ 2020–21ರಲ್ಲಿ ‘ಮತ್ತೆ ಕಲ್ಯಾಣ’, ‘ಶಿವಸಂಚಾರ ನಾಟಕೋತ್ಸವ’ದಂತಹ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗಿತ್ತು. ಈ ಬಾರಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆಯೋಜಿಸುವಂತೆ ಹಲವರು ಅಪೇಕ್ಷೆಪಡುತ್ತಿದ್ದರು. ತಿಪಟೂರು ಹಾಗೂ ಅರಸೀಕೆರೆ ಜನ ತಮ್ಮ ಭಾಗದಲ್ಲಿ ಆಯೋಜಿಸುವಂತೆ ಕೇಳಿಕೊಂಡಿದ್ದರು. ಸದಾಲೋಚನೆ, ಸತ್ಕಾರ್ಯ, ಸಂಘಟನೆ, ಭಾವೈಕ್ಯ, ಒಡೆದ ಮನಸ್ಸುಗಳನ್ನು ಒಗ್ಗೂಡಿಸುವುದು, ಊರಿನ ಜನರಲ್ಲಿ ಸಾಮೃಸ್ಯ ಮೂಡಿಸುವುದು ‘ಮತ್ತೆ ಕಲ್ಯಾಣದ’ ಆಶಯ ಎಂದು ಹೇಳಿದರು.

ADVERTISEMENT

ಆಗಸ್ಟ್‌ 1ರಂದು ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ, ಮಧ್ಯಾಹ್ನ 1ಕ್ಕೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.‌ಬಿಲ್ಲಪ್ಪ ಅವರಿಂದ ಶಿವಧ್ವಜಾರೋಹಣ ನೇರವೇರಲಿದೆ. ಸಂಜೆ 4ಕ್ಕೆ ಅರಸೀಕೆರೆಗೆ ತೆರಳಿ ಅಲ್ಲಿ ಸಾಮರಸ್ಯದ ಪಾದಾಯಾತ್ರೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹೈಕೋರ್ಟ್‌ ನಿವೃತ್ತ ನ್ಯಾಯಾಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಕಾರ್ಯಕ್ರಮ ಉದ್ಘಾಟಿಸುವರು. ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ, ಇಷ್ಟಲಿಂಗ ದೀಕ್ಷೆ, ಸಂಜೆ 6ಕ್ಕೆ ‘ಶರಣರ ತಾತ್ವಿಕ ಚಿಂತನಾ ಗೋಷ್ಠಿ’, ವಚನಗೀತೆ, ಉಪನ್ಯಾಸ ಇರಲಿದೆ. ನಿತ್ಯ ಒಬ್ಬೊಬ್ಬ ಸ್ವಾಮೀಜಿಯವರು ಸಾನ್ನಿಧ್ಯ ವಹಿಸವರು. ಕಲ್ಯಾಣಗೀತೆಯೊಂದಿಗೆ ಸಮಾರಂಭ ಮುಗಿಯುತ್ತದೆ. ನಂತರ ‘ಮರಣವೇ ಮಹಾನವಮಿ’ ನಾಟಕ ಪ್ರದರ್ಶಿಸಲಾಗುತ್ತದೆ. ಕೊನೆಯಲ್ಲಿ ಸಾಮೂಹಿಕ ದಾಸೋಹ ನಡೆಯುತ್ತದೆ ಎಂದು ಸ್ವಾಮೀಜಿ ವಿವರಿಸಿದರು.

ಆಗಸ್ಟ್‌ 29ರಂದು ಸಮಾರೋಪ ಸಮಾರಂಭ ತಿಪಟೂರಿನಲ್ಲಿ ನಡೆಯುತ್ತದೆ. ಸಿಡ್ಲೇಹಳ್ಳ ಮಹಾಸಂಸ್ಥಾನದ ಗುರುಕುಲಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಬೆಂಗಳೂರು ಗಡಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಸಮಾರೋಪದ ನುಡಿ ಆಡುವರು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.