ADVERTISEMENT

ಅಕ್ರಮ ಎಸಗಿದವರ ರಾಜಾರೋಷ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 9:35 IST
Last Updated 21 ಅಕ್ಟೋಬರ್ 2011, 9:35 IST

ಮಂಗಳೂರು: ದೇಶದಲ್ಲಿ ಅಕ್ರಮ ಎಸಗಿದವರು ಜೈಲುಪಾಲಾಗದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆದರೆ ಸಮಾಜ ಸೇವಕರು, ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯ (ಎಸ್‌ಡಿಪಿಐ) ಜಿಲ್ಲಾ ಘಟಕ ಅಧ್ಯಕ್ಷ ಕೆ. ಅಬ್ದುಲ್ ಜಲೀಲ್ ಟೀಕಿಸಿದರು.

ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಧರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರಗಳು ಅಧಿಕಾರದಾಹದಿಂದ ಜನವಿರೋಧಿ ನೀತಿ ತಾಳಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರ ನೈತಿಕತೆ ಮರೆತು ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.

ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ ಮಾತನಾಡಿ, ಜನತೆ ಸುಮ್ಮನಿರುವವರೆಗೆ ರಾಜಕಾರಣಿಗಳು ರಾಜ್ಯವನ್ನು ನಿರಂತರ ಲೂಟಿ ಮಾಡುತ್ತಾರೆ. ಈ ನಿಟ್ಟಿನಲ್ಲಿ ಉಗ್ರ ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದರು.

ಎಸ್‌ಡಿಪಿಐ ಮಂಗಳೂರು ದಕ್ಷಿಣ ಘಟಕ ಅಧ್ಯಕ್ಷ ಸಿದ್ದೀಕ್ ಕಣ್ಣೂರು, ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ನವಾಜ್ ಉಳ್ಳಾಲ್, ಬಂಟ್ವಾಳ ಘಟಕ ಅಧ್ಯಕ್ಷ ಯೂಸುಫ್ ಆಲಡ್ಕ, ಜಿಲ್ಲಾ ಘಟಕ ಉಪಾಧ್ಯಕ್ಷ ನಜೀರ್ ಸಜಿಫ, ಜಿಲ್ಲಾ ಸಮಿತಿ ಸದಸ್ಯ ಶರೀಫ್ ಕೊಲ್ನಾಡ್, ಜಿಲ್ಲಾ ಕಾರ್ಯದರ್ಶಿ ಸಲೀಂ ಗುರುವಾಯನಕೆರೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.