ADVERTISEMENT

ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

ಉಳ್ಳಾಲ: ಹೆದ್ದಾರಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:50 IST
Last Updated 19 ಡಿಸೆಂಬರ್ 2012, 10:50 IST

ಉಳ್ಳಾಲ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಅಕ್ರಮವಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉಪ ವಿಭಾಗಾಧಿಕಾರಿ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ನೇತೃತ್ವದಲ್ಲಿ ತೆರವುಗೊಳಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು.

ರಾಜೇಶ್ ಶೆಟ್ಟಿ ಎಂಬವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನಗೊಳಿಸಿದ ಅಂಬಿಕಾರೋಡಿನ ಜಾಗದಲ್ಲಿ ಒಂದು ಮಹಡಿಯ ವಾಣಿಜ್ಯ ಸಂಕೀರ್ಣದ ಕಾಮಗಾರಿ ಆರಂಭಿಸಿದ್ದರು. ಈ ಬಗ್ಗೆ ಕಟ್ಟಡ ಮಾಲೀಕರಿಗೆ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಮೌಖಿಕವಾಗಿ ಎಚ್ಚರಿಸಿದ್ದರು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ಅವರು ಕಾಮಗಾರಿಯನ್ನು ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಕಟ್ಟಡದ ಎರಡು ಪಿಲ್ಲರ್‌ಗಳನ್ನು ತೆರವುಗೊಳಿಸಿದರು. ಬಳಿಕ ಕಟ್ಟಡ ಮಾಲೀಕ ಮನವಿ ಮಾಡಿದ ಮೇರೆಗೆ ಮೂರು ದಿನಗಳ ಕಾಲಾವಕಾಶ ನೀಡಲಾಯಿತು.

ಮಾಧ್ಯಮದೊಂದಿಗೆ ಮಾತನಾಡಿದ ಡಾ.ವೆಂಕಟೇಶಯ್ಯ, `ನಂತೂರಿನಿಂದ ತಲಪಾಡಿವರೆಗೆ 60 ಮೀ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಪರಿಹಾರ ಧನವಾಗಿ ರೂ. 75 ಕೋಟಿಯಲ್ಲಿ ರೂ. 45 ಕೋಟಿ ವಿತರಿಸಲಾಗಿದೆ.

ಈ ನಡುವೆ ಕೆಲವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕರಿಸಿರುವ ಹೈಕೋರ್ಟ್ ಭೂಸ್ವಾಧೀನ ಕಾರ್ಯ ಮುಂದುವರಿಸಲು ತಿಳಿಸಿದೆ. ಇದೀಗ ರಾಜೇಶ್ ಅವರು ಭೂ ಸ್ವಾಧೀನಗೊಳಿಸಿದಂತಹ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದು, ಸರ್ಕಾರಿ ಜಾಗವಾಗಿರುವುದರಿಂದ ಕಂದಾಯ ಇನ್‌ಸ್ಪೆಕ್ಟರ್‌ಗಳು ಮೌಖಿಕವಾಗಿ ಎಚ್ಚರಿಸಿದ್ದರು.

ಆದರೂ ಕಾಮಗಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ. ಅಕ್ರಮ ಕಟ್ಟಡವನ್ನು ಮೂರು ದಿನಗಳ ಒಳಗೆ ಸಂಪೂರ್ಣ ತೆರವುಗೊಳಿಸಲು ಆದೇಶಿಸಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.