ADVERTISEMENT

ಅಕ್ರಮ ಮರಳುಗಾರಿಕೆ: ಲಾರಿ ವಶ

​ಪ್ರಜಾವಾಣಿ ವಾರ್ತೆ
Published 30 ಮೇ 2012, 6:05 IST
Last Updated 30 ಮೇ 2012, 6:05 IST
ಅಕ್ರಮ ಮರಳುಗಾರಿಕೆ: ಲಾರಿ ವಶ
ಅಕ್ರಮ ಮರಳುಗಾರಿಕೆ: ಲಾರಿ ವಶ   

ಪಡುಬಿದ್ರಿ: ಶಾಂಭವಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದನ್ನು ಸಾರ್ವಜನಿಕರು ತಡೆದ ಘಟನೆ ಮಂಗಳವಾರ ಸಂಜೆ ಹೆಜಮಾಡಿಯ ಶಿವನಗರದಲ್ಲಿ ನಡೆದಿದೆ.

ಹೆಜಮಾಡಿ ಶಿವನಗರ ತಗ್ಗು ಭಾಸ್ಕರ ಶೆಟ್ಟಿ ಎಂಬುವರಿಗೆ ಸೇರಿದ ಜಾಗದಲ್ಲಿ ಕಟಪಾಡಿ ಮೂಲದ ಗುತ್ತಿಗೆದಾರರು ಲೀಸ್ ಆಧಾರದಲ್ಲಿ ಮರಳು ಸಾಗಿಸುತ್ತಿದ್ದರು. ಆದರೆ ಸಂಬಂದಿಸಿದ ಇಲಾಖೆಯಿಂದ ಪರವಾನಗಿ ಪಡೆಯದೆ ಮರಳು ಸಾಗಿಸಲಾಗುತಿತ್ತು. ನಿರಂತರ ಮರಳು ಸಾಗಾಟದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದಾಗಿ ಸ್ಥಳೀಯರು ದೂರು ನೀಡಿದ್ದರು. ಮಂಗಳವಾರ ಸಂಜೆ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆದರು.

ಸ್ಥಳೀಯರ ದೂರಿನ ಆಧಾರದ ಮೇಲೆ ಮೂರು ದಿನಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ನಡೆಸಿ ಮರಳುಗಾರಿಕೆ ಸ್ಥಗಿತಗೊಳಿಸಿದ್ದರು. ಆದರೆ ಮಂಗಳವಾರ ಮತ್ತೆ ಮರಳುಗಾರಿಕೆ ಆರಂಭಗೊಂಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಹೆಜಮಾಡಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಮರಳುಗಾರಿಕೆ ತಡೆಗೆ ಒತ್ತಾಯಿಸಿದ್ದರು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವರದಾಕ್ಷಿ ಪಿ.ಸಾಲ್ಯಾನ್, ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ, ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಸದಸ್ಯ ಕೃಷ್ಣ ಅವರು ಮರಳುಗಾರಿಕೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಪಡುಬಿದ್ರಿ ಪೊಲೀಸರು, ಉಡುಪಿ ತಹಶೀಲ್ದಾರರಿಗೆ ದೂರು ನೀಡಿದ್ದರು. ಬಳಿಕ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮರಳು ತುಂಬಿಸಿದ್ದ ಮೂರು ಟೆಂಪೋ (407) ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭ ಮರಳುಗಾರಿಕೆ ಕೆಲಸಗಾರರಿಗೆ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ನ್ನು ತೆರವುಗೊಳಿಸಿದರು.

ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಹೊಳೆಗೆ ಮಣ್ಣು ತುಂಬಿಸಿ ಸಮತಟ್ಟು ಗೊಳಿಸಲಾಗಿದೆ. ಸಿಆರ್‌ಝೆಡ್ ನಿಯಮ ಉಲ್ಲಂಘಿಸಿ ಹೊಳೆ ಒತ್ತುವರಿ ಮಾಡಲಾಗಿದೆ ಎಂದೂ ಸ್ಥಳೀಯರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.