ADVERTISEMENT

ಆರು ಲಕ್ಷ ಜನರಿಂದ ಕುಡ್ಲ ದಸರಾ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:15 IST
Last Updated 8 ಅಕ್ಟೋಬರ್ 2011, 10:15 IST

ಮಂಗಳೂರು: ಹತ್ತು ದಿನಗಳ ದಸರಾ ಉತ್ಸವದಲ್ಲಿ ಏಳು ಲಕ್ಷಕ್ಕೂ ಅಧಿಕ ಜನರನ್ನು ಸೆಳೆದಿದ್ದ ಹಾಗೂ ಗುರುವಾರ ರಾತ್ರಿ ಇಡೀ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿದ್ದ ನವದುರ್ಗೆಯರನ್ನು ಒಳಗೊಂಡ ಶಾರದೆ, ಗಣಪತಿ ವಿಗ್ರಹಗಳ ಶೋಭಾಯಾತ್ರೆ ಶುಕ್ರವಾರ ಬೆಳಿಗ್ಗೆ 6.10ಕ್ಕೆ ಕೊನೆಗೊಂಡಿತು.
 
ಬೆಳಿಗ್ಗೆ 8ಕ್ಕೆ ಕೊನೆಯದಾಗಿ ಶಾರದೆಯ ವಿಗ್ರಹವನ್ನು ಕುದ್ರೋಳಿ ದೇವಸ್ಥಾನದ ಪುಷ್ಕರಿಣಿಯಲ್ಲಿ ವಿಸರ್ಜಿಸುವ ಮೂಲಕ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ಪರಿಸಮಾಪ್ತಿಗೊಂಡಿತು.

ಗೋಕರ್ಣನಾಥ ದೇಗುಲ ಆವರಣದಿಂದ ಗುರುವಾರ ಸಂಜೆ 4ಕ್ಕೆ ದಸರಾ ಶೋಭಾಯಾತ್ರೆ ಆರಂಭವಾಗಿತ್ತು. ಕುದ್ರೋಳಿ ರಸ್ತೆ, ಎಂ.ಜಿ. ರಸ್ತೆ, ಕೆ.ಎಸ್.ರಾವ್ ರಸ್ತೆ, ರಥಬೀದಿ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ಮರಳಿದ ಮೆರವಣಿಗೆಯಲ್ಲಿ ಒಟ್ಟು 42 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಮಧ್ಯರಾತ್ರಿ, ನಸುಕಿನಲ್ಲಿ ಸಹ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಗಣಪತಿ, ನವದುರ್ಗೆಯರು, ಶಾರದೆಯ ವಿಗ್ರಹದ ಬಳಿ ಕುಳಿತ ಅರ್ಚಕರು, ವಾಹನಗಳ ಚಾಲಕರು ಸಹಿತ ಇತರ ಎಲ್ಲರೂ ರಾತ್ರಿ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳದೆ ನಿರಂತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆ 6.10ಕ್ಕೆ ಶಾರದೆಯ ವಿಗ್ರಹ ಹೊತ್ತ ವಾಹನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಮುಂಭಾಗಕ್ಕೆ ಬಂದು ನಿಂತಿತು.

ಶಾರದೆಯ ಕುತ್ತಿಗೆ, ಕಾಲುಂಗುರು ವೀಣೆಯ ತಂತಿ ಸಹಿತ ಮೈತುಂಬ ಚಿನ್ನದ ಸರಗಳು, ಆಭರಣಗಳೇ ತುಂಬಿದ್ದವು. ಹೀಗಾಗಿ ಅವನ್ನು ತೆಗೆಯುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಮೊದಲಾಗಿ ಗಣಪತಿ, ನವದುರ್ಗೆಯರನ್ನು ಎರಡು ದೋಣಿಗಳ ನಡುವೆ ನಿಧಾನವಾಗಿ ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು. ಕೊನೆಯದಾಗಿ ಶಾರದೆ ವಿಗ್ರಹ ವಿಸರ್ಜಿಸಿದಾಗ ಹಲವರು ಕಣ್ತುಂಬಿಕೊಂಡರು.

ಈ ಬಾರಿಯ ಮಂಗಳೂರು ದಸರಾ ಸಂದರ್ಭದಲ್ಲಿ ಅ. 3ರಂದು ವಿಧವೆಯರಿಂದ ಚಂಡಿಕಾ ಹೋಮ, ಹೂ-ಕುಂಕುಮ ವಿತರಣೆ, ಬೆಳ್ಳಿರಥ ಎಳೆಸಿದ್ದು ವಿಶೇಷವಾಗಿತ್ತು. ಅ. 5ರಂದು 1.5 ಲಕ್ಷಕ್ಕೂ ಅಧಿಕ ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದು, 35 ಸಾವಿರಕ್ಕೂ ಅಧಿಕ ಮಂದಿ ಮಧ್ಯಾಹ್ನ ಪ್ರಸಾದ ಭೋಜನ ಸ್ವೀಕರಿಸಿದ್ದರು. ಹತ್ತು ದಿನಗಳಲ್ಲಿ 6 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.