ADVERTISEMENT

ಆರೋಪ ಸಾಬೀತುಪಡಿಸಲಿ: ಸವಾಲು

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 7:30 IST
Last Updated 14 ಜೂನ್ 2012, 7:30 IST
ಆರೋಪ ಸಾಬೀತುಪಡಿಸಲಿ: ಸವಾಲು
ಆರೋಪ ಸಾಬೀತುಪಡಿಸಲಿ: ಸವಾಲು   

ಪುತ್ತೂರು: ಹೈಕೋರ್ಟ್‌ನ ಆದೇಶ ಮತ್ತು ಜಿಲ್ಲಾಧಿಕಾರಿಗಳ ಅಧಿಸೂಚನೆ ದಿಕ್ಕರಿಸಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರವರ್ತಕರ ದುಂಡಾವರ್ತನೆ ತಡೆಯಬೇಕೆಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದವರು ಬುಧವಾರ ಪುತ್ತೂರಿನ ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿದರು.

ಬಜರಂಗದಳದ ಪುತ್ತೂರು ಸಹ ಸಂಚಾಲಕ ಬಿ.ಭಾಸ್ಕರ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ `ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳ ಸಂಚಾರಕ್ಕೆ ಸಂಬಂಧಿಸಿ ಈ ಹಿಂದೆಯೇ ಶಾಸಕರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಆದರೆ ಅವರು ಈ ಎಲ್ಲಾ ನಿರ್ಣಯ, ಕಾಯ್ದೆ ಕಾನೂನುಗಳನ್ನು ಮೀರಿ ತಮ್ಮಿಷ್ಟ  ಇಷ್ಟಬಂದಂತೆ ಸಂಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳಿಂದ ಹಣ ಪಡೆದು ಬಿಎಂಎಸ್ ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಟ್ರಾಕ್ಟ್ ಕ್ಯಾರೇಜ್‌ನವರು ತಮ್ಮ ಆರೋಪ ಸಾಬೀತುಪಡಿಸಲಿ ಎಂದು  ಸವಾಲು ಹಾಕಿದರು.

ಮಂಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ ಮಾತನಾಡಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ನವರು ಹೈಕೋರ್ಟ್‌ನ ಆದೇಶ ಪಾಲನೆ ಮಾಡುತ್ತಿಲ್ಲ. ಸಾರಿಗೆ ಪ್ರಾಧಿಕಾರದ ಷರತ್ತುಗಳನ್ನು ಉಲ್ಲಂಘಿಸಿ, ಜಿಲ್ಲಾಧಿಕಾರಿಗಳ ಅಧಿಸೂಚನೆ ಧಿಕ್ಕರಿಸಿ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳ ಅನಧಿಕೃತ ಕಾರ್ಯಾಚರಣೆಯನ್ನು  ತಡೆಯಲು ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಅವರು ಆಗ್ರಹಿಸಿದರು.

ಮಜ್ದೂರ್ ಸಂಘದ ವಿಭಾಗ ಮಟ್ಟದ ಮಾಜಿ ಕಾರ್ಯದರ್ಶಿ ಎಪಿ ಶೇಷಪ್ಪ ಗೌಡ, ಪದಾಧಿಕಾರಿಗಳಾದ ಸಂಜೀವ ಗೌಡ, ತಿಮ್ಮಪ್ಪ ಮೂಲ್ಯ, ಸತ್ಯ ಶಂಕರ ಭಟ್, ದಯಾನಂದ ಕಲ್ಲಡ್ಕ, ವೆಂಕಟರಮಣ ಭಟ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.