ADVERTISEMENT

ಇಂಗ್ಲಿಷ್ ವ್ಯಾಮೋಹ ಸಂಸ್ಕೃತಿಗೆ ದಕ್ಕೆ: ಗಣೇಶ್ ಕಿಣಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:23 IST
Last Updated 9 ಏಪ್ರಿಲ್ 2013, 6:23 IST

ಬೆಳ್ವೆ (ಸಿದ್ದಾಪುರ): ಗ್ರಾಮೀಣ ಭಾಗದ ಪೋಷಕರು ವಿದ್ಯಾರ್ಥಿಗಳನ್ನು ಇಂಗ್ಲಿಷ್ ಮಾಧ್ಯಮಗಳಿಗೆ ಕಳುಹಿಸುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿಸುವುದರಿಂದ ಭಾರತೀಯ ಸಂಸ್ಕೃತಿಯ ಅರಿವು ಕಡಿಮೆಯಾಗುತ್ತಿದೆ ಎಂದು ಬೆಳ್ವೆ ಉದ್ಯಮಿ ಗಣೇಶ ಕಿಣಿ ಹೇಳಿದರು.

ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು ದೊರೆಯುವುದರಿಂದ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ರೂಪುಗೊಳ್ಳುವಲ್ಲಿ ಸಹಕಾರ ನೀಡಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ಕೃಷ್ಣಮೂರ್ತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಶಿಕ್ಷಕರ ಶ್ರಮ, ನಿಷ್ಟೆಯಿಂದ  ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ದಾನಿಗಳ ಕೂಡುಗೆಯಿಂದ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ ಎಂದರು. 

ವಿಜಯ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಜಯರಾಮ ಶೆಟ್ಟಿ ಶಾಲಾ ನವೀಕೃತ ಸಭಾ ಭವನವನ್ನು ಉದ್ಘಾಟಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ, ರಾಮಚಂದ್ರ ಅಲ್ಸೆ ಸೆಟ್ಟೋಳ್ಳಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ಚಂದ್ರ ಶೆಟ್ಟಿ, ನಿವೃತ್ತ ಶಿಕ್ಷಕ ಬೋಜರಾಜ ಶೆಟ್ಟಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ, ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ, ಬೆಳ್ವೆ ಸಂಕರನಾರಾಯಣ ದೇವಳದ ಮೊಕ್ತೇಸರ ಶಂಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕ ಶೋಧನ್ ಭಂಡಾರಿ ಉಪಸ್ಥಿತರಿದ್ದರು.

ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೋಪಾಲ ಎನ್.ಜಿ. ಧ್ವಜರೋಹಣ ನೆರವೇರಿಸಿದರು. ಶಾಂತಲಾ ಶಾಂತಾರಾಮ ಸಿಹಿ ತಿಂಡಿ ವಿತರಿಸಿದರು. ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಪರ್ಧೆ, ವಿವಿಧ ವಿನೋದಾವಳಿಗಳು, ಪ್ರಹಸನ, ಯಕ್ಷಗಾನ ನಡೆಯಿತು. ಶಿಕ್ಷಕ ಕೀಶನ್‌ರಾಜ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ ವರದಿ ಸಲ್ಲಿಸಿದರು.  ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸೀತಾರಾಮ ಶೆಟ್ಟಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.