ADVERTISEMENT

ಎಂಆರ್‌ಪಿಎಲ್- ಕಾರ್ಗೊಗೇಟ್ ಬಂದ್ ಇಂದು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 9:25 IST
Last Updated 3 ಜೂನ್ 2011, 9:25 IST
ಎಂಆರ್‌ಪಿಎಲ್- ಕಾರ್ಗೊಗೇಟ್ ಬಂದ್ ಇಂದು
ಎಂಆರ್‌ಪಿಎಲ್- ಕಾರ್ಗೊಗೇಟ್ ಬಂದ್ ಇಂದು   

ಮಂಗಳೂರು/ ಸುರತ್ಕಲ್: ಎಂಆರ್‌ಪಿಎಲ್ ಪ್ರಥಮ ಹಾಗೂ ದ್ವಿತೀಯ ಹಂತದ ಯೋಜನಾ ಪ್ರದೇಶದ ಕಾರ್ಗೊಗೇಟ್ ಶುಕ್ರವಾರ ಬಂದ್ ಮಾಡಿಸಿ ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಎಂಎಸ್‌ಇಜೆಡ್ ಯೋಜನೆಯಿಂದ ನಿರ್ವಸಿತರಾಗಿರುವ ಕುಟುಂಬಗಳ ಉದ್ಯೋಗ ಆಕಾಂಕ್ಷಿಗಳು ಘೋಷಿಸಿದ್ದಾರೆ.
 

ನೌಕರಿ ಭರವಸೆಯೊಂದಿಗೆ ಎಂಎಸ್‌ಇಜೆಡ್, ಕೆಪಿಟಿಯಲ್ಲಿ ತರಬೇತಿ ನೀಡಿ ತಿಂಗಳುಗಳೇ ಕಳೆದಿದ್ದರೂ ಉದ್ಯೋಗ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ಹೋರಾಟವನ್ನು ತೀವ್ರಗೊಳಿಸುವುದಾಗಿ ಗುರುವಾರ ಘೋಷಿಸಿದರು.

ಎಂಎಸ್‌ಇಜೆಡ್‌ನಿಂದ ಲಿಖಿತವಾಗಿ ಉದ್ಯೋಗದ ಸ್ಪಷ್ಟ ಭರವಸೆ ದೊರೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದಿರುವ ಪ್ರತಿಭಟನಾಕಾರರು, ಎಂಆರ್‌ಪಿಎಲ್ ಕಾರ್ಗೊಗೇಟ್, ಇ ಗೇಟ್, ಡಿ ಗೇಟ್, ಒಎಂಪಿಎಲ್, ಐಎಸ್‌ಪಿಆರ್‌ಎಲ್ ಪ್ರದೇಶದ ಗೇಟ್‌ಗಳನ್ನು ಗುರುವಾರ ಬೆಳಿಗ್ಗೆ ಮುಚ್ಚಿಸಿ ಯಾವುದೇ ಕಾರ್ಮಿಕರು ಒಳಪ್ರವೇಶಿಸಿ ಕೆಲಸ ನಡೆಸದಂತೆ ತಡೆದರು.

`ಎಂಆರ್‌ಪಿಎಲ್ ಸಂಸ್ಥೆಯೊಳಗೆ ನೀರಿನ ಟ್ಯಾಂಕ್ ಹೋಗಲು ಮಾತ್ರ ಬಿಟ್ಟಿದ್ದೇವೆ. ಉಳಿದ ಎಲ್ಲಾ ಸರಕು-ಸಾಮಗ್ರಿ ಸಾಗಣೆಯನ್ನೂ ತಡೆಯಲಾಗಿದೆ~ ಎಂದು ಪ್ರತಿಭಟನಾಕಾರರು ತಿಳಿಸಿದರು. `ಪ್ರಜಾವಾಣಿ~ ಜತೆ ಮಾತನಾಡಿದ ಉದ್ಯೋಗಾಕಾಂಕ್ಷಿ ಕುಮಾರ್, ಫಲವತ್ತಾದ ಭೂಮಿಯನ್ನು ಯೋಜನೆಗೆ ನೀಡಿ ಉದ್ಯೋಗ ಭರವಸೆ ಹಿನ್ನೆಲೆಯಲ್ಲಿ ಕೆಪಿಟಿಯಲ್ಲಿ 3 ವರ್ಷದ ತರಬೇತಿಗೆ ಸೇರಿದೆವು, ಉದ್ಯೋಗ ನೀಡದಿದ್ದಾಗ ಜಿಲ್ಲಾಧಿಕಾರಿ ಕಚೇರಿ ಬಳಿ 25 ದಿನಗಳ ನಿರಂತರ ಶಾಂತಿಯುತ ಪ್ರತಿಭಟನೆ ನಡೆಸಿದೆವು.

ಉಸ್ತುವಾರಿ ಸಚಿವರ ನೇತೃತ್ವದ ಸಭೆ ಕಂಪೆನಿಗಳಿಗೆ ಉದ್ಯೋಗ ನೀಡಲು 2 ವಾರ ಗಡುವು ನೀಡಿತು. ರೂ. 6ಸಾವಿರದಿಂದ 8 ಸಾವಿರದವರೆಗೆ ವೇತನ ನೀಡುವಂತೆ ಹೇಳಿತು. ಆದರೆ ಗಡುವು ಮುಗಿದು 2 ತಿಂಗಳೇ ಕಳೆದರೂ ಕಂಪೆನಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಎಸ್‌ಇಜೆಡ್ ಹಿತರಕ್ಷಣಾ ಸಮಿತಿಯವರು ನಮ್ಮ ಶಾಂತಿಯುತ ಹೋರಾಟಕ್ಕೆ ಭಂಗ ತರುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಶ್ರೀಮಂತ ದಲ್ಲಾಳಿಗಳು ನಮ್ಮ ಸ್ಥಿತಿಗೆ ಕಾರಣ. ಅವರಿಗೆ ಮಾತ್ರ ಲಾಭ ಆದುದು. ಜಾಗಕ್ಕೂ ಪರಿಹಾರ ಸಿಕ್ಕಿದ್ದು ಕಡಿಮೆ. ಅಹಿತಕರ ಘಟನೆ ಸಂಭವಿಸಿದರೆ ಸಂಸ್ಥೆಯವರೇ ನೇರ ಹೊಣೆ ಎಂದು ಅವರು ಎಚ್ಚರಿಸಿದರು.

`ತರಬೇತಿ ಪಡೆದ ನಮಗೆ ಉದ್ಯೋಗ ನೀಡುವ ಬದಲು ಇಲ್ಲಿ ಬೇರೆ 700 ಮಂದಿಗೆ ಉದ್ಯೋಗ ನೀಡಲಾಗಿದೆ. ಎಂಆರ್‌ಪಿಎಲ್‌ಗೆ 80 ಹಾಗೂ 620 ಮಂದಿಯನ್ನು ಇತರೆ ಕಂಪೆನಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೋರಾಟ ಮಾಡಿದ ನಮಗೆ ಉದ್ಯೋಗ ನೀಡದೆ ಪರವೂರಿನವರಿಗೆ ಉದ್ಯೋಗ ನೀಡಲು ಮುಂದಾಗಿರುವುದು ತಪ್ಪು~ ಎಂದು ಉದ್ಯೋಗಾಕಾಂಕ್ಷಿ ಶಿವರಾಜ್ ಆಕ್ಷೇಪ ವ್ಯಕ್ತಪಡಿಸಿದರು.

`ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಮೂರು ವಾರಗಳಲ್ಲಿ ನೇಮಕ ಆದೇಶ ನೀಡುವುದಾಗಿ ಭರವಸೆ ನೀಡಿದ್ದರು. ಮತ್ತೆ ಪ್ರಶ್ನಿಸಿದಾಗ, ಈಗ ಬ್ರಹ್ಮಕಲಶೋತ್ಸವದಲ್ಲಿ ಬಿಜಿ ಇದ್ದೇನೆ ಎಂದಿದ್ದರು. ಈಗ ಪ್ರಶ್ನಿಸಿದರೆ, `ನೀವು ಏನು ಬೇಕಾದರೂ ಮಾಡಿಕೊಳ್ಳಿ~ ಎಂಬ ಉತ್ತರ ನೀಡುತ್ತಿದ್ದಾರೆ~ ಎಂದು ಶಿವರಾಜ್ ಬೇಸರ ವ್ಯಕ್ತಪಡಿಸಿದರು.

`ಎಂಆರ್‌ಪಿಎಲ್ ಸಂಸ್ಥೆಯವರು ತಮ್ಮ ಸಿಬ್ಬಂದಿಯಿಂದಲೇ ಸಂಸ್ಥೆಗೆ ಕಲ್ಲು ಹೊಡೆಸುತ್ತಿದ್ದಾರೆ. ಗುರುವಾರ ನಾಲ್ವರು ಕಲ್ಲೆಸೆಯುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಶಾಂತಿಯುತ ಪ್ರತಿಭಟನೆ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಮಾರ್, ಶಿವರಾಜ್, ತೇಜಾಕ್ಷ, ಜಗದೀಶ್ ಆರೋಪಿಸಿದರು.

ಸಂಸದ ನಳಿನ್ ಬೆಂಬಲ: ಸಂಸದ ನಳಿನ್ ಕುಮಾರ್ ಕಟೀಲ್, ಪ್ರತಿಭಟನೆ ಸ್ಥಳಕ್ಕೆ ಗುರುವಾರ ಭೇಟಿ ಮಾಡಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸ್ಥಳೀಯ ಜಮೀನು ಪಡೆಯುವ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶ್ರೀಕರ ಪ್ರಭು, ಉಮಾನಾಥ ಕೋಟ್ಯಾನ್, ಜಿ.ಪಂ. ಸದಸ್ಯರಾದ ರಿತೇಶ್ ಶೆಟ್ಟಿ, ಈಶ್ವರ ಕಟೀಲು, ಬಜ್ಪೆ ಗ್ರಾ.ಪಂ. ಅಧ್ಯಕ್ಷ ಸಾಹುಲ್ ಹಮೀದ್, ತಾ.ಪಂ. ಮಾಜಿ ಸದಸ್ಯ ಟಿ.ಎ.ಖಾದರ್, ಸತ್ಯಜಿತ್ ಸುರತ್ಕಲ್ ಭೇಟಿ ನೀಡಿ ಬೆಂಬಲ ಸೂಚಿಸಿದರು.
ಶಾಮಿಯಾನ-ಶೀಟು: ಪ್ರತಿಭಟನೆ ವೇಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಕಾರಿಡಾರ್ ರಸ್ತೆಯಲ್ಲಿ ಈವರೆಗೆ ಶಾಮಿಯಾನ ಹಾಕಲಾಗಿತ್ತು. ಗುರುವಾರ ಮಳೆ ಆರಂಭಗೊಂಡಿರುವುದರಿಂದ ತಗಡಿನ ಶೀಟಿನ ಆಸರೆ ಪಡೆದ್ದ್ದಿದಾರೆ.

ಎಂಎಸ್‌ಇಜೆಡ್-ಸರ್ಕಾರದ ನಡಾವಳಿಯೇ ಅಂತಿಮ: ಡಿ.ಸಿ.
ಮಂಗಳೂರು:
ಮಂಗಳೂರು ವಿಶೇಷ ಆರ್ಥಿಕ ವಲಯದಿಂದ (ಎಂಎಸ್‌ಇಜೆಡ್) ನಿರ್ವಸಿತರಾಗುವವರಿಗೆ ಉದ್ಯೋಗ, ಪರಿಹಾರ ನೀಡಿಕೆಯಲ್ಲಿ ಸರ್ಕಾರ ಹೊಸದಾಗಿ ನಡಾವಳಿಗಳನ್ನು ರೂಪಿಸಿದ್ದು, ಅದನ್ನು ಸಂತ್ರಸ್ತರು ಪಾಲಿಸಲೇಬೇಕು. ಸರ್ಕಾರ ಮುಂದಿಟ್ಟ ಕ್ರಮಗಳ ಬಗ್ಗೆ ಸಂತ್ರಸ್ತರಿಗೆ ಮನವರಿಕೆ ಮಾಡುವ ಕೆಲಸ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಹೇಳಿದ್ದಾರೆ.

ಸುರತ್ಕಲ್ ಭಾಗದ್ಲ್ಲಲಿ ಎಂಎಸ್‌ಇಜೆಡ್ ಕಾಮಗಾರಿಗಳಿಗೆ ಸ್ಥಳೀಯರು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ಸ್ಥಳೀಯರ ಒಪ್ಪಿಗೆ ಪಡೆದೇ ಯೋಜನೆ ಆರಂಭಿಸಲಾಗಿತ್ತು. ಆಗ ಆದ ಒಪ್ಪಂದವನ್ನು ಜಾರಿಗೆ ತರಲಾಗುತ್ತಿದೆ. ಮೊದಲ ಪಿಡಿಎಫ್‌ನವರಿಗೆ ಎಲ್ಲಾ ರೀತಿಯ ಪರಿಹಾರ, ಉದ್ಯೋಗ ನೀಡಲಾಗಿದೆ. 2ನೇ ಮತ್ತು 3ನೇ ಪಿಡಿಎಫ್‌ನಲ್ಲಿ 332 ಮಂದಿ  ಕನಿಷ್ಠ ವಿದ್ಯಾರ್ಹತೆ ಇಲ್ಲದವರು ಇದ್ದಾರೆ ಎಂದರು.

ಸರ್ಕಾರ ನೀಡಿದ ನಡಾವಳಿಯಲ್ಲಿ ಉದ್ಯೋಗ, ಶಿಷ್ಯವೇತನ ಸಹಿತ ಹಲವು ಪರಿಹಾರ ಸೂತ್ರಗಳಿವೆ. ಸಂತ್ರಸ್ತರು ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ವಿನಂತಿಸಿದರು.

ಏನಿದು ಪಿಡಿಎಫ್?
ಯೋಜನೆಯೊಂದು ಕಾರ್ಯಗತಗೊಳ್ಳುವಾಗ ಸಂತ್ರಸ್ತರಾಗುವವರಿಗೆ ನೀಡುವ  ಪುನರ್ವಸತಿ, ಪುನರ್‌ನಿರ್ಮಾಣ, ಪರಿಹಾರದ ಪ್ಯಾಕೇಜ್‌ಗೆ ಪಿಡಿಎಫ್ ಹೆಸರು.ಭೂಸ್ವಾಧೀನ ಅಧಿಸೂಚನೆಗೆ ಒಂದು ವರ್ಷ ಮೊದಲಿನಿಂದಲೂ ಸ್ಥಳದಲ್ಲಿ ಇರುವವರು 1ನೇ ಪಿಡಿಎಫ್‌ಗೆ ಸೇರುತ್ತಾರೆ. ಇವರಿಗೆ ಉದ್ಯೋಗ, ಬದಲಿ ನಿವೇಶನ, ಚರಾಸ್ತಿಯ ಮೌಲ್ಯದಷ್ಟು ಪರಿಹಾರ, ಉದ್ಯೋಗ ನಿರಾಕರಿಸಿದವರಿಗೆ ಆಗ ನಿಗದಿಪಡಿಸಿದಷ್ಟು ಪರಿಹಾರ ಸಿಗುತ್ತದೆ.

ಭೂಸ್ವಾಧೀನ ಅಧಿಸೂಚನೆ ಹೊರಬಿದ್ದ ಒಂದು ವರ್ಷದ ತನಕ ಮನೆ ನಂಬ್ರ ಮಾಡಿಕೊಂಡವರು 2ನೇ ಪಿಡಿಎಫ್‌ಗೆ ಸೇರುತ್ತಾರೆ. ಇವರಿಗೆ ಬದಲಿ ನಿವೇಶನ ಇಲ್ಲ. ಉದ್ಯೋಗ, ಚರಾಸ್ತಿ ಮೌಲ್ಯಕ್ಕೆ ಪರಿಹಾರ, ಉದ್ಯೋಗ ನಿರಾಕರಿಸಿದರೆ ಅದಕ್ಕೆ ತಕ್ಕ ಪರಿಹಾರ ಲಭಿಸುತ್ತದೆ.

ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ ಒಂದು ವರ್ಷದ ನಂತರ ಮನೆ ನಂಬ್ರ ಮಾಡಿಕೊಂಡವರು 3ನೇ ಪಿಡಿಎಫ್‌ಗೆ ಸೇರುತ್ತಾರೆ. ಇವರಿಗೆ ಉದ್ಯೋಗದ ಹೊರತು ಬೇರೆ ಯಾವುದೇ ಪರಿಹಾರ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT