ADVERTISEMENT

ಎಂಜಿನಿಯರ್, ಡಾಕ್ಟರ್ ಬಿಟ್ಟು ವಿಜ್ಞಾನಿಗಳಾಗಿ: ಮಧ್ಯಸ್ಥ ಸಲಹೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 8:05 IST
Last Updated 19 ನವೆಂಬರ್ 2012, 8:05 IST

ಬ್ರಹ್ಮಾವರ: ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ದು ಅದರಲ್ಲಿ ಹೆಚ್ಚಿನ ಪ್ರಯೋಗಶೀಲತೆಯನ್ನು ಬೆಳೆಸಿಕೊಂಡು ದೇಶದ ಸಂಪನ್ಮೂಲಗಳನ್ನು ರಕ್ಷಿಸುವ, ಬೆಳೆಸುವ ಅಗತ್ಯ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್),  ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿಯ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಪ್ರೌಢಶಾಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗುವ ಬಗ್ಗೆ  ಪೋಷಕರು ಕನಸು ಕಾಣುತ್ತಾರೆಯೇ ಹೊರತು ತನ್ನ ಮಗು ದೊಡ್ಡ ವಿಜ್ಞಾನಿಯಾಗಬೇಕೆಂಬ ಹಂಬಲ ಅವರಲ್ಲಿ ಇರುವುದಿಲ್ಲ. ಭವಿಷ್ಯದಲ್ಲಿ ವಿಜ್ಞಾನದ ಅವಶ್ಯಕತೆಯ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ತಿಳಿ ಹೇಳುವ ಅಗತ್ಯ ಇದೆ. ಮಕ್ಕಳನ್ನು  ಕ್ರಿಯಾಶೀಲರನ್ನಾಗಿ ಮಾಡಿಸಲು ಇಂತಹ ಚಟುವಟಿಕೆಗಳತ್ತ ಶಿಕ್ಷಕರು ಮತ್ತು ಹೆತ್ತವರು ಮನಸ್ಸು ಹಾಯಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್, ಉಡುಪಿ ಡಯಟ್‌ನ ಜಯಶ್ರೀ ಕೆ.ಆರ್, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ, ಕಾಲೇಜಿನ  ಪ್ರಾಂಶುಪಾಲೆ ತಾರಾದೇವಿ, ಎಸ್.ಡಿ.ಎಂ.ಸಿಯ ಉಪಾಧ್ಯಕ್ಷ ರಘುಪತಿ ಬ್ರಹ್ಮಾವರ,  ಉಪಪ್ರಾಂಶುಪಾಲ ಬಿ.ಟಿ.ನಾಯ್ಕ, ಭಾಸ್ಕರ್ ರೈ, ಬಿ.ಎಸ್.ಎನ್.ಎಲ್‌ನ ನವೀನ್ ಚಂದ್ರ, ಭೀಮರಾಜ್, ಅಧ್ಯಾಪಕಿ ಸುಶೀಲ ಇದ್ದರು.

ವಿಜ್ಞಾನ, ಸಮಾಜ ಮತ್ತು ಪರಿಸರ ಎನ್ನುವ ಮುಖ್ಯ ವಿಷಯದ ಬಗ್ಗೆ ನಡೆದ ಈ ಸ್ಪರ್ಧೆಯಲ್ಲಿ ಕೃಷಿ ಮತ್ತು ಆಹಾರದ ಸಂರಕ್ಷಣೆ, ಶಕ್ತಿ ಸಂಪನ್ಮೂಲ ಮತ್ತು ಸಂರಕ್ಷಣೆ, ಸ್ವಾಸ್ಥ್ಯ, ಪರಿಸರದ ಕೊಡುಗೆಗಳು ಮತ್ತು ಸಂರಕ್ಷಣೆ, ನಿತ್ಯ ಜೀವನದಲ್ಲಿ ಗಣಿತ ಮತ್ತು ವಿಕೋಪ ನಿರ್ವಹಣೆ ಹೀಗೆ 6 ವಿಷಯಗಳ ಬಗ್ಗೆ 100ಕ್ಕೂ ಹೆಚ್ಚು ಮಂದಿ ಮತ್ತು 10ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.