ADVERTISEMENT

ಎಂಡೊ ಸಂತ್ರಸ್ತರಿಗೆ ಸರ್ಕಾರಿ ಸವಲತ್ತು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:58 IST
Last Updated 6 ಏಪ್ರಿಲ್ 2013, 6:58 IST

ಕಾಸರಗೋಡು: ಪ್ರತಿಯೊಬ್ಬ ಎಂಡೋಸಲ್ಫಾನ್ ಸಂತ್ರಸ್ತರಿಗೂ ಸರ್ಕಾರಿ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಂ.ಕೆ.ಮುನೀರ್ ಭರವಸೆ ನೀಡಿದರು.

ಬೋವಿಕ್ಕಾನದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ನಬಾರ್ಡ್ ಯೋಜನೆಗಳ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸನ್ನು ಸರ್ಕಾರ ನಿರಾಕರಿಸುವುದಿಲ್ಲ. ನಬಾರ್ಡಿನ ರೂ 200ಕೋಟಿ ಮೊತ್ತದ ಆರ್ಥಿಕ ಸಹಾಯ ಜಿಲ್ಲೆಗೆ ಲಭಿಸಿದೆ. ರಾಜ್ಯ ಸರ್ಕಾರ ಶೆ.15ರಷ್ಟು ಮೊತ್ತವನ್ನು ನೀಡಲಿದೆ. ನಬಾರ್ಡಿನ ಶೇ 85 ಸಾಲವನ್ನು ಮರುಪಾವತಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. 11 ಪಂಚಾಯಿತಿಗಳ ಹೊರಗಿನ ಎಂಡೋಸಲ್ಫಾನ್ ಬಾಧಿತರನ್ನು ಪತ್ತೆ ಮಾಡಲು ಪ್ರತ್ಯೇಕ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು. ನಬಾರ್ಡ್ ಯೋಜನೆಯನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಎಲ್ಲಾ ಪ್ರಾಜೆಕ್ಟ್‌ಗಳಿಗೂ 15 ದಿನಗಳ ಒಳಗೆ ಅಂಗೀಕಾರ ನೀಡಲಾಗುವುದು ಎಂದೂ ಅವರು ವಿವರಿಸಿದರು.

ಇರಿಯಣ್ಣಿ ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲಾ ಕಟ್ಟಡದ ಕಾಮಗಾರಿಯನ್ನು ಇದೇ ಸಂದರ್ಭದಲ್ಲಿ ಎಂ.ಕೆ.ಮುನೀರ್ ಮತ್ತು ಮುಳಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣವನ್ನು ಕೆ.ಪಿ.ಮೋಹನ್ ಅವರು ಉದ್ಘಾಟಿಸಿದರು.

ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಪಿ.ಎಸ್.ಮೊಹಮ್ಮದ್ ಸಗೀರ್ ವರದಿ ಮಂಡಿಸಿದರು. ನಬಾರ್ಡ್ ಎಜಿಎಂ ಎನ್.ಗೋಪಾಲನ್ ಯೋಜನೆಯನ್ನು ವಿವರಿಸಿದರು. ಶಾಸಕ ಕೆ.ಕುಞ್ಞೆರಾಮನ್ (ತೃಕ್ಕರಿಪುರ) ಪುರವಣಿಯನ್ನು ಬಿಡುಗಡೆಗೊಳಿಸಿದರು. `ಕೋನ್‌ಕೋಡ್' ಸಿಡಿಯನ್ನು ಉಪಜಿಲ್ಲಾಧಿಕಾರಿ ಪಿ.ಕೆ.ಸುಧೀರ್ ಬಾಬು ಬಿಡುಗಡೆಗೊಳಿಸಿದರು.

ಶಾಸಕರಾದ ಎನ್.ಎ.ನೆಲ್ಲಿಕುಂಜೆ, ಪಿ.ಬಿ.ಅಬ್ದುಲ್ ರಸಾಕ್, ಮಾಜಿ ಸಚಿವ ಚೆರ್ಕಳ ಅಬ್ದುಲ್ಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್.ಕುರ‌್ಯಾಕೋಸ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷರು, ವಿವಿಧ ಪಕ್ಷಗಳ ನಾಯಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.