ADVERTISEMENT

ಎರಡನೇ ಹಂತಕ್ಕೆ ಗ್ರಾಮಸ್ಥರ ವಿರೋಧ

ಪಾದೂರು ಐಎಸ್‌ಪಿಆರ್‌ಎಲ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:44 IST
Last Updated 5 ಸೆಪ್ಟೆಂಬರ್ 2013, 8:44 IST

ಕಾಪು (ಪಡುಬಿದ್ರಿ):  ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್‌ಪಿಆರ್‌ಎಲ್ ಎರಡನೇ ಹಂತದ ಯೋಜನೆಗೆ ಹುನ್ನಾರ ನಡೆಯುತ್ತಿದ್ದು, ಎರಡನೇ ಹಂತದ ಯೋಜನೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಮಂಗಳವಾರ ಕಾಪುವಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಾದೂರು-ಕುತ್ಯಾರು-ಕಳತ್ತೂರು ಗ್ರಾಮದ ಜನಜಾಗೃತಿ ಸಮಿತಿಯ ಪರವಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಂಗಳವಾರ ಕಾಪುವಿನಲ್ಲಿ ಹೇಳಿದರು. ಮಾತನಾಡಿದರು.

ಪ್ರಥಮ ಹಂತದ ಕಾಮಗಾರಿಗೆ ಸ್ವಇಚ್ಛೆಯಿಂದ ಸ್ಥಳಗಳನ್ನು ಬಿಟ್ಟುಕೊಟ್ಟಿದ್ದೇವೆ. ಇದೇ ವೇಳೆ ದ್ವಿತೀಯ ಹಂತದ ಭೂಸ್ವಾಧೀನವನ್ನು ವಿರೋಧಿಸಿ ಕುತ್ಯಾರು-ಪಾದೂರು-ಕಳತ್ತೂರು ಗ್ರಾಮಗಳನ್ನೊಳಗೊಂಡ ಜನಜಾಗೃತಿ ಸಮಿತಿಯ ಪರಿಸರದ ಗ್ರಾಮಸ್ಥರೆಲ್ಲರೂ 2011ರ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.

ಸದಾನಂದ ಗೌಡ ಅವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಎರಡನೇ ಹಂತಕ್ಕೆ ಚಾಲನೆ ಇಲ್ಲ ಎಂದು ಹೇಳಿದ್ದರು. ಇದೀಗ ಪೆಟ್ರೋಲಿಯಂ ಇಲಾಖೆಯ ರಾಜ್ಯ ಸಚಿವೆ ಪನಬಾಕ ಲಕ್ಷ್ಮಿ ರಾಜ್ಯ ಸಭೆಯಲ್ಲಿ ಮಂಡಿಸಿರುವ ಕಾಪು ಸಮೀಪದ ಪಾದೂರು ಗ್ರಾಮದ ಐ.ಎಸ್.ಪಿ.ಆರ್.ಎಲ್. ಯೋಜನೆಯ ದ್ವಿತೀಯ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ಒಡ್ಡುವುದಾಗಿ ತಿಳಿಸಿದ್ದಾರೆ.

ಪ್ರಥಮ ಹಂತದ ಯೋಜನೆಗೆ ದೇಶದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಸ್ವ ಇಚ್ಛೆಯಿಂದ ಸ್ಥಳಗಳನ್ನು ಬಿಟ್ಟು ಕೊಟ್ಟಿರುವ ನಾವು ಇನ್ನು ಯಾವುದೇ ಕಾರಣಕ್ಕೂ, ಜನತೆಗೆ ಮಾಹಿತಿಯನ್ನು ನೀಡದೆ ಏಕಾಏಕೀ ನಡೆಸುವ ಸರ್ವೇ ಕಾರ್ಯ, ಪಾರದರ್ಶಕವಲ್ಲದ ಯೋಜನೆಗೆ ಸ್ಥಳವನ್ನು ಬಿಟ್ಟು ಕೊಡಲು ಸಿದ್ಧರಿಲ್ಲ ಎಂದು ಕುತ್ಯಾರು ಪ್ರಸಾದ್ ಶೆಟ್ಟಿ ಹೇಳಿದರು.

ಕೇಂದ್ರದ ಯೋಜನೆ ಎಂದು ಕೊಲ್ಕೊತ್ತ ಮೂಲದವರಿಂದ ಅವೈಜ್ಞಾನಿಕ ಸರ್ವೇ ಕಾರ್ಯ ನಡೆಸಿದ್ದು, ಕೃಷಿ ಭೂಮಿ, ರೈತರನ್ನೇ ನಾಶಪಡಿಸುವ ಈ ಯೋಜನೆಯನ್ನು ಸ್ವಾಗತಿಸಿದ್ದೇ ತಪ್ಪು ಎಂಬ ಭಾವನೆ ನಮಗಾಗಿದೆ. ಅನಿವಾರ್ಯವಾದಲ್ಲಿ ರಾಜಕೀಯದಿಂದ ಹಿಂದಕ್ಕೆ ಸರಿಯುವುದಾಗಿ ಜೆ.ಡಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು.

ಈ ಮೊದಲು 2.5 ಮೆಟ್ರಿಕ್ ಟನ್ ಗಾತ್ರದ ಯೋಜನೆ ಇದಾಗಿದ್ದು, ಇದೀಗ ಮತ್ತೆ 5 ಮೆಟ್ರಿಕ್ ಟನ್ ಯೋಜನೆಯನ್ನು ಈ ಪ್ರದೇಶದಲ್ಲಿ ಹೇರಲು ಯತ್ನಿಸಿದಲ್ಲಿ ಈ ಭಾಗದ 3 ಗ್ರಾಮಗಳು ಸಂಪೂರ್ಣ ನಾಶವಾಗಿದ್ದು, ಮುಕ್ತಾಯ ಹಂತದಲ್ಲಿರುವ ಪ್ರಥಮ ಹಂತದ ಯೋಜನೆಗೆ ಪೂರಕವಾಗಿ ತೋಕೂರಿನಿಂದ ಪಾದೂರು ವರೆಗಿನ ಪೈಪುಲೈನ್ ಹಾಗೂ ನಂದಿಕೂರಿನಿಂದ ಪಾದೂರು ವರೆಗಿನ ಹೈಟೆನ್ಷನ್ ವಿದ್ಯುತ್ ಲೈನಿಗಾಗಿ ನಡೆಸುತ್ತಿರುವ ಅವೈಜ್ಞಾನಿಕ ಭೂಸ್ವಾಧೀನತೆಯನ್ನೂ ಒಕ್ಕೊರಲಿನಲ್ಲಿ ಖಂಡಿಸಿ, ಸಂಪೂರ್ಣ ಸ್ಥಳವನ್ನು ಜುಜುಬಿ ಪರಿಹಾರಕ್ಕಾಗಿ ಕಳೆದುಕೊಂಡು ಸಣ್ಣ ಹಿಡುವಳಿದಾರರು ಸಂಪೂರ್ಣ ನಿರ್ಗತಿಕರಾಗಲಿರುತ್ತಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪೈಯಾರು ಶಿವರಾಮ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕಳತ್ತೂರು ವಿಶ್ವನಾಥ ಅಮೀನ್, ಅರುಣ್ ಶೆಟ್ಟಿ ಪಾದೂರು, ನಿತ್ಯಾನಂದ ಶೆಟ್ಟಿ, ಉಮೇಶ್ ಶೆಟ್ಟಿ ಕಳತ್ತೂರು ಮತ್ತಿತರ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.