ADVERTISEMENT

ಕಣ್ಮನ ಸೆಳೆದ ತರಹೇವಾರಿ ಗೂಡು ದೀಪ

ಕುದ್ರೋಳಿಯಲ್ಲಿ ‘ನಮ್ಮ ಕುಡ್ಲ’ ವಾಹಿನಿಯಿಂದ ಗೂಡು ದೀಪ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2017, 7:33 IST
Last Updated 18 ಅಕ್ಟೋಬರ್ 2017, 7:33 IST
ಕಣ್ಮನ ಸೆಳೆದ ತರಹೇವಾರಿ ಗೂಡು ದೀಪ
ಕಣ್ಮನ ಸೆಳೆದ ತರಹೇವಾರಿ ಗೂಡು ದೀಪ   

ಮಂಗಳೂರು: ಕಸದಿಂದ ರಸ ಪರಿಕಲ್ಪನೆಯಲ್ಲಿ ಟೂತ್‌ ಪೇಸ್ಟ್‌ ಟ್ಯೂಬ್‌ಗಳನ್ನು ಬಳಸಿ ಮಾಡಿದ ಗೂಡು ದೀಪ, ನೂರಾರು ಹಣತೆಗಳ ಬೆಳಕಿನಿಂದ ‍ಪ್ರಜ್ವಲಿಸುವ ಗೂಡು ದೀಪ, ಗೂಡುದೀಪದೊಳಗೆ ಆಲಂಕಾರಿಕ ಮೀನುಗಳ ನರ್ತನ, ತೆಂಗಿನ ಗರಿ ಬಳಸಿ ಮಾಡಿದ ಹಸಿರು ಗೂಡು ದೀಪ, ಕಥಕ್ಕಳಿಯ ಮುಖವಾಡ ಹೊತ್ತ ಗೂಡು ದೀಪ...

ಇವೆಲ್ಲವೂ ಕುದ್ರೋಳಿ ಗೋಕರ್ಣ ನಾಥ ಕ್ಷೇತ್ರದಲ್ಲಿ ಮಂಗಳವಾರ ಸಂಜೆ ‘ನಮ್ಮ ಕುಡ್ಲ’ ವಾಹಿನಿ ವತಿಯಿಂದ ನಡೆದ ಗೂಡು ದೀಪ ಸ್ಪರ್ಧೆಯಲ್ಲಿ ಕಂಡು ಬಂದ ವಿಶೇಷ ಬಗೆಯ ಗೂಡು ದೀಪಗಳು. 400ಕ್ಕೂ ಹೆಚ್ಚು ಮಂದಿ ತಾವು ಸಿದ್ಧಪಡಿಸಿದ ಗೂಡು ದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸಾಂಪ್ರದಾಯಿಕ ಮತ್ತು ಕಲಾತ್ಮಕ ಗೂಡು ದೀಪಗಳನ್ನು ಮನೆಗಳಲ್ಲೇ ಸಿದ್ಧಪಡಿಸಿ ತರಲು ಅವಕಾಶವಿತ್ತು. ಆಧುನಿಕ ಶೈಲಿಯ ಗೂಡು ದೀಪಗಳನ್ನು ಸ್ಪರ್ಧಾ ಸ್ಥಳದಲ್ಲೇ ರಚಿಸಬೇಕಿತ್ತು. ಸಂಜೆ 5 ಗಂಟೆಯಿಂದಲೇ ಸ್ಪರ್ಧಿಗಳು ಗೋಕರ್ಣನಾಥ ಕ್ಷೇತ್ರದ ಆವರಣಕ್ಕೆ ಬಂದು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಬಗೆ ಬಗೆಯ ಗೂಡು ದೀಪಗಳನ್ನು ನೋಡಿ, ಆನಂದಿಸುವುದಕ್ಕಾಗಿಯೇ ಸಾವಿರಾರು ಮಂದಿ ದೇವಸ್ಥಾನಕ್ಕೆ ಬಂದಿದ್ದರು.

ADVERTISEMENT

ತ್ಯಾಜ್ಯದಲ್ಲಿ ಕಲಾಕೃತಿ: ಸ್ಪರ್ಧಿಯೊಬ್ಬರು ತ್ಯಾಜ್ಯವನ್ನು ಕಲಾಕೃತಿಯನ್ನಾಗಿ ಪರಿ ವರ್ತಿಸುವ ಉದ್ದೇಶದಿಂದ ಖಾಲಿಯಾದ ಟೂತ್‌ ಪೇಸ್ಟ್‌ ಟ್ಯೂಬ್‌ಗಳನ್ನು ರಚಿಸಿದ್ದ ಗೂಡು ದೀಪ ಎಲ್ಲರ ಗಮನ ಸೆಳೆಯಿತು. ಇದಕ್ಕಾಗಿ ಅವರು 2,365 ಟ್ಯೂಬ್‌ಗಳನ್ನು ಬಳಸಿದ್ದರು. ದೊಡ್ಡ ಗಾತ್ರದ 912 ಮತ್ತು ಸಣ್ಣ ಗಾತ್ರದ 1,455 ಟ್ಯೂಬ್‌ಗಳನ್ನು ಗೂಡು ದೀಪ ರಚಿಸಲು ಬಳಸಿದ್ದರು.

ಹಳೆಯಂಗಡಿ ಸಮೀಪದ 10ನೇ ತೋಕೂರು ಓಂಕಾರೇಶ್ವರ ಭಜನಾ ಮಂಡಳಿ ಸದಸ್ಯರು ಹಣತೆಗಳನ್ನೇ ಬಳಸಿ ಗೂಡು ದೀಪ ತಯಾರಿಸಿದ್ದರು. ನೂರಾರು ಸಂಖ್ಯೆಯ ಹಣತೆಗಳು ಗೂಡು ದೀಪದಲ್ಲಿ ಉರಿಯುತ್ತಿದ್ದರಿಂದ ಅಲ್ಲಿ ‘ಬೆಳಕಿನ ದೀಪಾವಳಿ’ ಸೃಷ್ಟಿಯಾಗಿತ್ತು.

ಬೀರಿಯ ಪಾಲಿಟೆಕ್ನಿಕ್‌ ವಿದ್ಯಾರ್ಥಿ ಗಣೇಶ್‌ ಕೋಟೆಕಾರ್‌ ಆಕ್ವೇರಿಯಂ ಹೊಂದಿದ್ದ ಗೂಡು ದೀಪವನ್ನು ಸ್ಪರ್ಧೆಗೆ ತಂದಿದ್ದರು. ನಾಲ್ಕೂವರೆ ತಿಂಗಳ ಕಾಲ ಶ್ರಮಿಸಿ ಅದನ್ನು ಅವರು ರಚಿಸಿದ್ದರು. ಗೂಡುದೀಪದ ಒಳಗಿದ್ದ ಆಲಂಕಾರಿಕ ಮೀನುಗಳ ಓಡಾಟ ನೋಡುಗರ ಮನ ಸೆಳೆಯಿತು.

ಬೀರಿಯ ಆಕಾಶ್‌ ಶರ್ಮ ಎಂಬ ವಿದ್ಯಾರ್ಥಿ 40,000 ಬೆಂಕಿ ಕಡ್ಡಿಗಳನ್ನು ಬಳಸಿ ರಚಿಸಿದ್ದ ಗೂಡು ದೀಪದೊಂದಿಗೆ ಸ್ಪರ್ಧೆಗೆ ಬಂದಿದ್ದರು. ಅಶೋಕನಗರದ ಆಶ್ಲೇಷ್‌ ಎಂಬ ವಿದ್ಯಾರ್ಥಿ ತೆಂಗಿನ ಗರಿ ಗಳಲ್ಲಿ ರಚಿಸಿದ್ದ ಹಸಿರು ಗೂಡುದೀಪ ಕಣ್ಮನ ಸೆಳೆಯುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.