ಉಡುಪಿ: ಕಳೆದ ಎಂಟು ವರ್ಷಗಳಿಂದ ಸಣ್ಣಪುಟ್ಟ ಚುನಾವಣೆಗಳಲ್ಲಿ ಕೂಡ ಜಯಗಳಿಸದೇ ಕರಾವಳಿ ಭಾಗದಲ್ಲಿ ಸೋತು ಸುಣ್ಣವಾಗಿ, ಭಾರಿ ವಿಜಯಕ್ಕಾಗಿ ಹಂಬಲಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಗೆಲುವು ಆತ್ಮ ಸ್ಥೈರ್ಯವನ್ನು ತಂದುಕೊಟ್ಟಿದೆ.
ಸಚ್ಚಾರಿತ್ರ್ಯದ ರಾಜಕಾರಣಿ ಎಂದೇ ಹೆಸರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಗೆಲುವು ನಿಸ್ಸಾರವಾಗಿದ್ದ ಕಾಂಗ್ರೆಸ್‌ಗೆ ಟಾನಿಕ್ ಆಗಿ ಪರಿಣಮಿಸಿದೆ. 2004ರ ವಿಧಾನಸಭಾ ಚುನಾವಣೆ ಬಳಿಕ ಬಹುತೇಖ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಮಾತ್ರ ಕಂಡಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಯಾಗಿದ್ದ ಕರಾವಳಿಯಲ್ಲಿ ಕಾಂಗ್ರೆಸ್ ಮತ್ತೆ ಫಿನಿಕ್ಸ್‌ನಂತೆ ಹುಟ್ಟಿಬಂದಿದೆ. ಕಮಲದ ಕೋಟೆ ಛಿದ್ರವಾಗಿದೆ. 45 ಸಾವಿರದಷ್ಟು ಮತಗಳ ಅಂತರದ ಕಾಂಗ್ರೆಸ್ ಗೆದ್ದಿರುವುದು ಬಿಜೆಪಿಗೆ ಆಘಾತ ತಂದಿದೆ.
`ಕಾಂಗ್ರೆಸ್ ಅವಸಾನದ ಪಕ್ಷ, ಆ ಪಕ್ಷದಲ್ಲಿ ಎಲ್ಲರೂ ನಾಯಕರೇ, ಕಾರ್ಯಕರ್ತರೇ ಇಲ್ಲ~ ಎಂದು ಮೂದಲಿಕೆಗೆ ಒಳಗಾಗಿದ್ದ ಈ ಪಕ್ಷ ಈಗ ಉಭಯ ಜಿಲ್ಲೆಗಳಲ್ಲಿ ವಿಜಯೋತ್ಸವ ಆಚರಿಸುತ್ತಿದೆ.
ಬಿಜೆಪಿ ಸೋಲಿಗೆ ಕಾರಣವೇನು?: ಕಳೆದೊಂದು ದಶಕದಿಂದ ಬಿಜೆಪಿ ಭದ್ರ ಕೋಟೆಯಾಗಿಬಿಟ್ಟಿದ್ದ ಉಡುಪಿ- ಚಿಕ್ಕಮಗಳೂರು ಭಾಗದಲ್ಲಿ ಬಿಜೆಪಿ ಕಾರ್ಯ ಕರ್ತರು ತೀವ್ರವಾದ ಉತ್ಸಾಹದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ಬಿಜೆಪಿಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳು, `ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆ~ ಕುಖ್ಯಾತಿ, 11 ಸಚಿವರ ಜೈಲು ಸೇರುವಿಕೆ...ಇತ್ಯಾದಿ ಇತ್ಯಾದಿ ಕಾರಣಗಳಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಮುಜುಗರಕ್ಕೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಮಲ್ಪೆಯಲ್ಲಿ ಬಿಜೆಪಿ ಸರ್ಕಾರದ ಅನುಮತಿ ಮೇರೆಗೆ ನಡೆದ ರೇವ್ ಪಾರ್ಟಿ ಕೂಡ ಬಿಜೆಪಿಯ `ಸಂಸ್ಕೃತಿ~ ಖ್ಯಾತಿಗೆ ಮಸಿ ಬಳಿದಿತ್ತು. ಅಲ್ಲದೇ ಬಿಜೆಪಿ ಮುಖಂಡರ ಒಳಜಗಳ, ಮುಖ್ಯಮಂತ್ರಿ ಪಟ್ಟಕ್ಕಾಗಿ ಹಂಬಲಿಸಿದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ಬಾರದೇ ರೆಸಾರ್ಟ್ ರಾಜಕೀಯ ನಡೆಸಿದ್ದು ಕೂಡ ಈ ಭಾಗದ ಮತದಾರರ ಮೇಲೆ ಪರಿಣಾಮ ಬೀರಿದ್ದವು ಎಂದೇ ವಿಶ್ಲೇಷಿಸಲಾಗಿದೆ. ಯಡಿಯೂರಪ್ಪ ಪ್ರಚಾರಕ್ಕೆ ಬಾರದೇ ಇದ್ದ ಕಾರಣದಿಂದಾಗಿ ತರೀಕೆರೆಯಲ್ಲಿ ಶೇ.60ರಷ್ಟಿದ್ದ ಲಿಂಗಾಯತ ಮತಗಳಲ್ಲಿ ಬಹಳಷ್ಟು ಮತಗಳು ಕಾಂಗ್ರೆಸ್ ಪಾಲಾಗಿವೆ ಎಂಬ ಮಾತು ಕೂಡ ಕೇಳಿ ಬಂದಿವೆ.
`ಯಾರೇ ದೊಡ್ಡವರು ಚುನಾವಣೆಗೆ ಬಾರದೇ ಇದ್ದರೂ ತೊಂದರೆ ಇಲ್ಲ, ನಾವು ಗೆದ್ದೇ ಗೆಲ್ಲುತ್ತೇವೆ~ ಎಂದು ಅತಿಯಾದ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ತವರು ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ನೋವು ತೀವ್ರವಾಗಿ ಕಾಡಲಿದೆ. ಚುನಾವಣೆಗೆ ಕೆಲವೇ ದಿನವಿದ್ದಾಗ 2004ರಲ್ಲಿ ಬಿಜೆಪಿಯ ಸಂಸದೆಯಾಗಿದ್ದ ಮನೋರಮಾ ಮಧ್ವರಾಜ್ ಅವರನ್ನು ಮೀನುಗಾರರ ಮತ ಪಡೆಯಲು ಕರೆಯಿಸಲಾಗಿತ್ತು. ಆದರೆ ಅದು ಕೂಡ ಪ್ರಯೋಜನವಾದಂತೆ ತೋರಿಲ್ಲ.
ನಾಮಪತ್ರ ಸಲ್ಲಿಕೆಗೆ ಒಳ್ಳೆಯ ದಿನವಿದೆ ಎಂದು ಒಮ್ಮೆ ಹಾಗೂ ಮುಖ್ಯಮಂತ್ರಿಗಳು, ರಾಜ್ಯ, ರಾಷ್ಟ್ರದ ಮುಖಂಡರೊಂದಿಗೆ ಒಮ್ಮೆ ಹೀಗೆ ಎರಡೆರಡು ಬಾರಿ ತಮ್ಮ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಸುನೀಲ್‌ಕುಮಾರ್‌ಗೆ ಮತದಾರರು ಕಾರ್ಕಳ ಮತ್ತು ಚಿಕ್ಕಮಗಳೂರು ಹೊರತಾಗಿ ಮತ್ತೆಲ್ಲಿಯೂ ಕೈ ಹಿಡಿಯಲಿಲ್ಲ. ಉಳಿದ ಎಲ್ಲ ಕಡೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗೇ ಮತದಾರರು ಮುನ್ನಡೆ ಒದಗಿಸಿದ್ದಾರೆ.
ಉಡುಪಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 12 ಸಾವಿರದಷ್ಟು ಹೆಚ್ಚು ಮತಗಳ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿಗೆ ಲಭಿಸಿದೆ. ಬಿಜೆಪಿಯ ಅಭ್ಯರ್ಥಿ ಪ್ರಾರಂಭದಿಂದಲೂ ಹೇಳಿಕೊಂಡು ಬಂದ ಹಿಂದುತ್ವ, ಬಜರಂಗದಳದ ಪ್ರಭಾವ ಇಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕೇವಲ ಕಾಂಗ್ರೆಸ್ ಅಭ್ಯರ್ಥಿಗಿಂತ ಕೇವಲ 2 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ಪಡದ್ದೇ ಸಾಕ್ಷಿ. ಈ ಬೆಳವಣಿಗೆ ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.
`ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ~ ಎಂದು ಕಾಂಗ್ರೆಸ್ ಮುಖಂಡರು ಪ್ರತಿ ಬಾರಿ ಹೇಳಿಕೊಳ್ಳುತ್ತಲೇ ಹೋದಾಗ ಇದು ಚುನಾವಣಾ ಪ್ರಚಾರದ ಗಿಮಿಕ್ ಎನ್ನುವಂತಾಗಿತ್ತು. ಆದರೆ ಅದೇ ಮಾತು ವಾಸ್ತವವಾಗಿದೆ.
`ರಾಜ್ಯದ ಬಿಜೆಪಿ ಸರ್ಕಾರದ ಬಗ್ಗೆ ಜನರಿಗಿರುವ ತಾತ್ಸಾರ ಈ ಚುನಾವಣೆಯಲ್ಲಿ ವ್ಯಕ್ತವಾಗಿದೆ~ ಎನ್ನುವುದು ಬಹುತೇಕರ ಅಭಿಪ್ರಾಯ.
`ಈ ಗೆಲುವಿಗೆ ನಾವು ಪ್ರಾರಂಭದ ದಿನಗಳಿಂದ ಮಾಡಿರುವ ಕೆಲಸವೇ ಕಾರಣ. ಈ ಬಾರಿ ಗೆದ್ದೇ ಗೆಲ್ಲಬೇಕು ಎನ್ನುವ ಕಾರಣಕ್ಕೆ ಪ್ರಾರಂಭದಿಂದಲೇ ಹೆಚ್ಚು ಸಕ್ರಿಯವಾಗಿ ಹಾಗೂ ವ್ಯವಸ್ಥಿತವಾಗಿ ಕೆಲಸ ಮಾಡಿದ್ದೇವೆ~ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಪೂಜಾರಿ ಹೇಳುತ್ತಾರೆ. ಅಚ್ಚರಿ ಎನ್ನುವಂತೆ ಈ ಬಾರಿ ಕಾಂಗ್ರೆಸ್‌ನ ಎಲ್ಲ ಮುಖಂಡರು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಅದೇ ಅವರಿಗೆ ಗೆಲ್ಲುವ ವಿಶ್ವಾಸ ಕೂಡ ಮೂಡಿಸಿತ್ತು. ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಮತ್ತೆ ಕಾಂಗ್ರೆಸ್‌ಗೆ ಹೊಸ ಹುರುಪು ಮೂಡುವಂತಾಗಿದೆ, ಬಿಜೆಪಿ ತಾನು ಎಡವಿದ್ದೆಲ್ಲಿ ಎಂದು ನೋಡಿಕೊಳ್ಳುವಂತಾಗಿದೆ.
ಜೆಡಿಎಸ್‌ಗೆ ನೆಲೆ ಬಲು ಕಷ್ಟ!: ಜೆಡಿಎಸ್ ಅಭ್ಯರ್ಥಿ ನಿಂತಿದ್ದೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಎನ್ನುವ ಮಾತಿಗೆ ಇಲ್ಲಿ ಬೆಲೆಯೇ ಬರಲಿಲ್ಲ. ಕರಾವಳಿ ಭಾಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಭಾರಿ ಹುರುಪಿನೊಂದಿದೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಕೇವಲ 8,721 ಮತಗಳನ್ನು ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಪಡೆದಿದೆ. ಅಭ್ಯರ್ಥಿ ಬೋಜೇಗೌಡರು ಒಟ್ಟು 72 ಸಾವಿರ ಮತಗಳನ್ನು ಪಡೆದಿದ್ದು ಉಳಿದ 64 ಸಾವಿರ ಮತಗಳು ಚಿಕ್ಕಮಗಳೂರು ಜಿಲ್ಲೆಯಿಂದಲೇ ಅವರಿಗೆ ಬಂದಿವೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯ ತಯಾರಿಯಲ್ಲಿದ್ದ ಜೆಡಿಎಸ್ ಮತ್ತೆ ಈ ಭಾಗದತ್ತ ಅಂಜಿಕೆಯಿಂದ ನೋಡುವಂತಾಗಿದೆ. ಮಾಜಿ ಶಾಸಕ ಯು.ಆರ್.ಸಭಾಪತಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಕೂಡ ಪಕ್ಷಕ್ಕೆ ಪ್ರಯೋಜನ ನೀಡಿಲ್ಲ.
ವಾಸ್ತು ಬದಲಾವಣೆ ಕಾರಣವೇ?
ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯಾಗುವ ಹೊತ್ತಿಗೆ ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ಮುಖದ್ವಾರವನ್ನು ಬದಲಾಯಿಸಲಾಗಿತ್ತು. ಸಭಾಂಗಣದ ಸದುಪಯೋಗಕ್ಕಾಗ ದ್ವಾರ ಬದಲಿಸಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದರೂ, ಆಸ್ಕರ್ ಫರ್ನಾಂಡಿಸ್ ಅವರು ವಾಸ್ತುಮೇಲಿಟ್ಟ ನಂಬಿಕೆಯೇ ಈ ಬದಲಾವಣೆಗೆ ಕಾರಣ. ಅದರಿಂದ ಗೆಲುವು ಸಿಗುತ್ತದೆ ಎನ್ನುವ ಉತ್ತರ ಕಾಂಗ್ರೆಸ್ ಪಾಳಯದಿಂದಲೇ ಕೇಳಿಬಂದಿತ್ತು. ಈ ಬಾರಿಯ ಚುನಾವಣೆಯ ಗೆಲುವು ಪಕ್ಷದ ಕಚೇರಿಯ ವಾಸ್ತು ಬದಲಾವಣೆಯೊಂದಿಗೆ ತಾಳೆ ಹಾಕುವ ಕೆಲಸವೂ ಇಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಗೆಲುವು ಹಲವು ವಿಮರ್ಶೆಗೆ ದಾರಿ ಮಾಡುತ್ತಿದೆ.
ಉಪಚುನಾವಣೆ- ಮತ ಹಂಚಿಕೆ
ಉಡುಪಿಜಿಲ್ಲೆ ಜೆ.ಪಿ ಹೆಗ್ಡೆ ಸುನೀಲ್ ಬೋಜೆಗೌಡ
ಕುಂದಾಪುರ 63550 54439 2108
ಉಡುಪಿ 63247 51824 1546
ಕಾಪು 50450 45171 2872
ಕಾರ್ಕಳ 52567 53879 2295
ಚಿಕ್ಕಮಗಳೂರು ಜಿಲ್ಲೆ
ಶೃಂಗೇರಿ 47496 41743 10315
ಮೂಡಿಗೆರೆ 40949 32136 14882
ಚಿ.ಮ 39705 41827 23864
ತರೀಕೆರೆ 40759 31978 14198
ಒಟ್ಟು 3,98,723 3,52,999 72,080
ಅಂಚೆ ಮತೆ 3 (ಒಂದು ಮತ ತಿರಸ್ಕೃತ)
ಒಟ್ಟು ಚಲಾಯಿತ ಮತ: 8,52, 824
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.