ADVERTISEMENT

ಕರ್ನಾಟಕ ಬಂದ್ : ದ.ಕದಲ್ಲಿ ಜನಜೀವನ ಅಬಾಧಿತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:55 IST
Last Updated 7 ಅಕ್ಟೋಬರ್ 2012, 8:55 IST

ಮಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್‌ಗಳು, ಆಟೊಗಳು, ಟ್ಯಾಕ್ಸಿಗಳು ಎಂದಿನಂತೆ ಚಲಿಸಿದ್ದರಿಂದ ಬಂದ್‌ನಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯೂ ಉಂಟಾಗಲಿಲ್ಲ. ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಹುಮಟ್ಟಿಗೆ ಬಂದ್ ಯಶಸ್ವಿಯಾಯಿತು. ವಾಹನ ಸಂಚಾರ ವಿರಳವಾಗಿದ್ದು, ಬಸ್ ಓಡಾಟ ಬಹುತೇಕ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಹೊರ ಜಿಲ್ಲೆಗಳಿಂದ ಬಸ್‌ಗಳು ಬಾರದೆ ಇದ್ದುದರಿಂದ ಯಾತ್ರಿಕರ ಸಂಖ್ಯೆ ಕಡಿಮೆಯಾಗಿತ್ತು. ಆದರೂ ಖಾಸಗಿ ವಾಹನಗಳಲ್ಲಿ ಬರುವ ಭಕ್ತರಿಗೆ ಕೊರತೆ ಇರಲಿಲ್ಲ. ದೇವಸ್ಥಾನದಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಇದ್ದುದರಿಂದ ಯಾರಿಗೂ ತೊಂದರೆಯಾಗಲಿಲ್ಲ.

ಮಂಗಳೂರಿನ ಹಂಪನಕಟ್ಟೆಯಲ್ಲಿ ಕಾವೇರಿ ಹೋರಾಟ ಸಮಿತಿ, ರೈತ ಸಂಘ, ಕನ್ನಡ ರಕ್ಷಣಾ ವೇದಿಕೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸದಸ್ಯರು ಮಾನವ ಸರಪಳಿ ನಡೆಸಿ ರಸ್ತೆ ತಡೆ ನಡೆಸಿದರು. ಪೊಲೀಸರು 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದರು.

ಇದಕ್ಕೆ ಮೊದಲು ಬಾವುಟಗುಡ್ಡೆಯಿಂದ ಹಂಪನಕಟ್ಟೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾವೇರಿ ಹೋರಾಟ ಸಮಿತಿಯ ಸಂಚಾಲಕ ಎಸ್.ಪಿ.ಚಂಗಪ್ಪ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನಗರದಲ್ಲಿ ಸಿಟಿ ಬಸ್‌ಗಳು ಮತ್ತು ಸರ್ಕಾರಿ ಬಸ್‌ಗಳ ಸೇವೆ ಯಥಾಸ್ಥಿತಿಯಲ್ಲಿತ್ತು. ಹೀಗಾಗಿ ಶಾಲಾ, ಕಾಲೇಜುಗಳಿಗೆ ಸಹ ರಜೆ ಘೋಷಿಸಲಿಲ್ಲ. ಕೆಲವೊಂದು ಶಾಲಾ ವಾಹನಗಳು ಸಂಚರಿಸದೆ ಇದ್ದುದರಿಂದ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಕಿರ್ಣಗಳೆಲ್ಲ ಎಂದಿನಂತೆ ಕಾರ್ಯನಿರ್ವಹಿಸಿದವು.

ಪುತ್ತೂರಿನಲ್ಲಿ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು. ಪುತ್ತೂರು ಪೇಟೆಯಲ್ಲಿ ಆಭರಣ ಅಂಗಡಿಗಳು ಮತ್ತು ಕೆಲವು ಮಳಿಗೆಗಳು ಮಾತ್ರವೇ ಮುಚ್ಚಿದ್ದವು.

ಜನರ ಓಡಾಟ ವಿರಳವಾಗಿದ್ದರಿಂದ ಕೆಲವೊಂದು ಮಾರ್ಗಗಳಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸುಳ್ಯದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿಗಳು, ಶಾಲಾ, ಕಾಲೇಜುಗಳು ಕಾರ್ಯ ನಿರ್ವಹಿಸಿದವು. ಕರ್ನಾಟಕ ರಕ್ಷಣಾ ವೇದಿಕೆಯವರು ಬೈಕ್ ರ‌್ಯಾಲಿ ನಡೆಸಿ ಬಳಿಕ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನೆಡಸಿದರು.

ಬೆಳ್ತಂಗಡಿ, ಬಂಟ್ವಾಳಗಳಲ್ಲಿ ಸಹ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.