ಮುಡಿಪು: ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಟ್ಟ ಎಂಬಲ್ಲಿ ರಸ್ತೆಗೆ ತಾಗಿಕೊಂಡೇ ಅಪಾಯಕಾರಿ ಹೊಂಡವೊಂದು ಬಾಯ್ತೆರದು ನಿಂತಿದೆ. ಹಲವಾರು ಅವಘಡಗಳಿಗೆ ಈ ಹೊಂಡ ಕಾರಣವಾಗುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿ ಇತ್ತ ಸುಳಿಯದೇ ಇರುವ ಪರಿಣಾಮ ಇದೀಗ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದೆ.
ನಾಲ್ಕೈದು ವರ್ಷಗಳ ಹಿಂದೆ ಇದೇ ಹೊಂಡ ಇರುವ ಪ್ರದೇಶದಲ್ಲಿ ಮಣ್ಣು ಕುಸಿದು ಬಿದ್ದಿತ್ತು. ವರ್ಷ ಕಳೆದರೂ ಅದನ್ನು ಸರಿಪಡಿಸುವ ಕಾರ್ಯ ನಡೆದಿರಲಿಲ್ಲ. ನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಇದನ್ನು ಸರಿಪಡಿಸಿ, ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ಇಲ್ಲಿ ಸಮಸ್ಯೆ ಕಂಡುಬಂದಿದೆ.
ನಾಟೆಕಲ್‌ನಿಂದ ಮಂಜನಾಡಿ ಹಾಗೂ ನರಿಂಗಾನಕ್ಕೆ ತೆರಳುವ ರಸ್ತೆಯಲ್ಲಿ ಈ ಅಪಾಯಕಾರಿ ಹೊಂಡವಿದ್ದು ಈಗಾಗಲೇ ಕೆಲವು ಅವಘಡಗಳು ನಡೆದುಹೋಗಿದೆ. ನಾಟೆಕಲ್- ಮಂಜನಾಡಿ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದೆ.
ಕೆಲವೊಂದು ವಾಹನಗಳೂ ಹೊಂಡಕ್ಕೆ ಬಿದ್ದು ಜಖಂಗೊಂಡಿರುವಂತೆ ರಾತ್ರಿ ವೇಳೆ ಈ ಕಡೆ ಬರುವ ಪಾದಚಾರಿಗಳು ಕೂಡಾ ಹೊಂಡಕ್ಕೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.ತಿರುವು ಪ್ರದೇಶವಾಗಿರುವ ಕಲ್ಕಟ್ಟದಲ್ಲಿ ಹಲವಾರು ತಿಂಗಳಿಂದ ಲಾರಿ ಮಗುಚಿ ಬಿದ್ದ ಪರಿಣಾಮ ಇಲ್ಲಿಯ ತಡೆ ಗೋಡೆಯ ಮಣ್ಣು ಕುಸಿದು ಈ ಹೊಂಡ ಸೃಷ್ಟಿಯಾಗಿದೆ. ಆದರೆ ಇದನ್ನು ಸರಿಪಡಿಸುವ ಯತ್ನವನ್ನು ಇಲ್ಲಿಯ ಗ್ರಾಮ ಪಂಚಾಯಿತಿ ಅಥವಾ ಬೇರೆ ಯಾವ ಇಲಾಖೆಯೂ ಮಾಡಿಲ್ಲ.
ಅಲ್ಲದೆ ಶಾಲಾ ಮಕ್ಕಳು ಕೂಡಾ ಇದೇ ಅಪಾಯಕಾರಿ ಪ್ರದೇಶದಲ್ಲೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ದೇರಳಕಟ್ಟೆ, ನಾಟೆಕಲ್ ಪ್ರದೇಶದಲ್ಲಿ ಹಲವಾರು ಪ್ರತಿಷ್ಟಿತ ಕಂಪೆನಿಗಳು ಹಾಗೂ ಕಟ್ಟಡಗಳು ನಿರ್ಮಾಣವಾಗಿದೆ, ಆದರೆ ಇದೇ ಭಾಗದ ಕೆಲವೊಂದು ಮೂಲಭೂತ ಸಮಸ್ಯೆಗಳು ಮಾತ್ರ ಇನ್ನು ಪರಿಹಾರ ಕಾಣದೇ ಬಾಕಿ ಉಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.