ADVERTISEMENT

ಕಲ್ಲುಕೋರೆ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:23 IST
Last Updated 4 ಏಪ್ರಿಲ್ 2013, 8:23 IST

ಕುಂದಾಪುರ: ತಾಲ್ಲೂಕಿನ ಬಗ್ವಾಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಲ್ಲುಕೋರೆ ಮುಚ್ಚುವಂತೆ ಆಗ್ರಹಿಸಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಶಿಲೆಗಲ್ಲು ಕೋರೆಗಳಿಂದಾಗಿ ಗ್ರಾಮಸ್ಥರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟಕಗಳ ಬಳಕೆಯಿಂದ ಗ್ರಾಮದ ಜನರ ಬದುಕು ಆತಂತ್ರವಾಗಿದೆ ಎಂದು ಬಗ್ವಾಡಿಯ ಮಹಿಷಾಮರ್ಧಿನಿ ಯುವಕ ಮಂಡಲದ ಸದಸ್ಯರು ದೂರಿದರು. ದೂರು ನೀಡಿದ ಹಿನ್ನೆಲೆಯಲ್ಲಿ ಬಗ್ವಾಡಿ ಶಿಲೆಗಲ್ಲಿನ ಕೋರೆಗಳಿರುವ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ತಹಶೀಲ್ದಾರರು ಪರಿಶೀಲಿಸಿ  ಸಮಸ್ಯೆ ಆಲಿಸಿದರು.

ಸ್ಥಳ ಪರಿಶೀಲನೆ ಬಳಿಕ ಸ್ಥಳೀಯ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ ಗಾಯತ್ರಿ ಅವರಲ್ಲಿ ಗ್ರಾಮಸ್ಥರು ತಮ್ಮ ಅಹವಾಲು  ತೋಡಿಕೊಂಡರು. ಬಗ್ವಾಡಿ ಹಾಗೂ ಆತ್ರಾಡಿ ಪರಿಸರದಲ್ಲಿ ವಾಸಿಸುವ 30 ಕುಟುಂಬಗಳು ಈ ಗಣಿಗಾರಿಕೆಯಿಂದಾಗಿ ಆತಂತ್ರ ಸ್ಥಿತಿ ಅನುಭವಿಸುತ್ತಿರುವುದಾಗಿ ಹೇಳಿಕೊಂಡರು. ನೂಜಾಡಿ ಗ್ರಾಮದ ಸರ್ಕಾರಿ ಭೂಮಿಯಲ್ಲಿಯೂ ಕಲ್ಲುಕೋರೆ ನಡೆಸಲು ಅನುಮತಿ ನೀಡಿರುವುದನ್ನು ಖಂಡಿಸಿದರು.

ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ಶಂಕರ ಶೆಟ್ಟಿ, ಉಪ ತಹಶೀಲ್ದಾರ್ ಕೊರಗ ಬಿಲ್ಲವ, ಗ್ರಾಮಕರಣಿಕ ವಿಘ್ನೇಶ್ ಉಪಾಧ್ಯಾಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ರಂಗಯ್ಯ ಶೆಟ್ಟಿ, ಸ್ಥಳೀಯರಾದ ರಾಧಾಕೃಷ್ಣ ಗಾಣಿಗ, ಶಂಕರನಾರಾಯಣ ಭಟ್, ಪ್ರಕಾಶ ಆಚಾರ್, ಆಶಾ ಕಾರ್ಯಕರ್ತೆ ಶಾರದ ಎಂ, ಯುವಕ ಮಂಡಲದ ಪದಾಧಿಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.