ADVERTISEMENT

ಕಳಸ: ಗುಣಮಟ್ಟದ ವಿದ್ಯುತ್‌ಗೆ ಒತ್ತಾಯಮೆಸ್ಕಾಂ ಕಚೇರಿ ಮುತ್ತಿಗೆ; ದಿಗ್ಬಂಧನ.

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:10 IST
Last Updated 11 ಮಾರ್ಚ್ 2011, 9:10 IST

ಕಳಸ: ಹೋಬಳಿಯಲ್ಲಿ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಗುರುವಾರ ಪಟ್ಟಣದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದರ ಜತೆಗೆ ಬಂದ್ ಆಚರಿಸಿ ಪ್ರತಿಭಟಿಸಿದರು.ಪಟ್ಟಣಕ್ಕೆ ನೀರು ಸರಬರಾಜು ಮಾಡುವ ವಿದ್ಯುತ್ ಪಂಪ್  ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ವಾರದಿಂದಲೂ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ  ನೀರು ಪೂರೈಸಲೂ ಆಗದೆ ಪಂಚಾಯಿತಿ ತೀವ್ರ ಟೀಕೆಗೆ ಗುರಿಯಾಗಿತ್ತು. ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಮೆಸ್ಕಾಂಗೆ ಮಾಡಿದ ಮನವಿಗೂ  ಪುರಸ್ಕಾರ ಸಿಕ್ಕಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ  ಕಳಸ ಬಂದ್‌ಗೆ ಕರೆ ನೀಡಲಾ ಯಿತು. ಎಲ್ಲ ಅಂಗಡಿ ಮಾಲೀಕರೂ ಬಾಗಿಲು ಮುಚ್ಚಿ ಸಹಕಾರ ನೀಡಿದರು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನಕುಮಾರ್ ಮತ್ತು ಸಹಾಯಕ ಎಂಜಿನಿಯರ್ ಅವರನ್ನು ಪಂಪ್ ಹೌಸ್ ಬಳಿಗೆ ಕರೆದೊಯ್ದ ಗ್ರಾ.ಪಂ. ಅಧ್ಯಕ್ಷ ಭರತ್‌ರಾಜ್ ಮತ್ತು ಸಂಗಡಿಗರು ವಿದ್ಯುತ್ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.

ಆ ವೇಳೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರವಿ ರೈ, ಶುಕೂರ್. ಸಿ.ಪಿ.ಐ. ಮುಖಂಡ ಗೋಪಾಲಶೆಟ್ಟಿ,ರಾಮಮೂರ್ತಿ ಮತ್ತಿತರರು ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಮಸ್ಯೆ ಸರಿಪಡಿಸುವವರೆಗೂ ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಬರಲೇಬೇಕು ಎಂದು ತಾಕೀತು ಮಾಡಿದ ಪ್ರತಿಭಟನಾಕಾರರು ಪಟ್ಟಣದಲ್ಲಿ ಮೆರವಣಿಗೆ ಯನ್ನೂ ನಡೆಸಿದರು. ಸಂಜೆಯ ವೇಳೆಗೆ ಕಳಸಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ಕುಮಾರ್ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.

‘ಜನರ ದುಡ್ಡಲ್ಲಿ ಕೈತುಂಬಾ ಸಂಬಳ ತೆಗೆದುಕೊಂಡು ಕತ್ತೆ ಕಾಯ್ತಿದ್ದೀರಾ’ ಎಂದು ಜನರು ಅಧಿಕಾರಿಗಳನ್ನು ಜರಿದರು. ಸರ್ಕಾರ, ಇಂಧನ ಸಚಿವೆ ಮತ್ತು ಶಾಸಕರ ವಿರುದ್ಧವೂ ಧಿಕ್ಕಾರ ಕೂಗಿದರು. ತಾ.ಪಂ. ಸದಸ್ಯ ಶೇಷಗಿರಿ, ಮಾಜಿ ಸದಸ್ಯ ಮಂಜಪ್ಪಯ್ಯ, ಹರ್ಷ ಮತ್ತಿತರರು ಅಧಿಕಾರಿಯೊಂದಿಗೆ ಸಮಾಲೋಚಿಸಿ ವಿದ್ಯುತ್‌ನ ಸಮರ್ಪಕ ವಿತ ರಣೆಗೆ ವೇಳಾಪಟ್ಟಿ ಸಿದ್ಧಪಡಿಸುವಂತೆ ಒತ್ತಾ ಯಿಸಿದರು.

ಅದರಂತೆ ಕಳಸ, ಸಂಸೆ,ಬಾಳೆಹೊಳೆ ಮತ್ತು ಜಾವಳಿ ಫೀಡರ್‌ಗಳಿಗೆ ದಿನದ 6 ಗಂಟೆ 3 ಫೇಸ್ ವಿದ್ಯುತ್ ಮತ್ತು ಕುಡಿಯುವ ನೀರಿನ ಘಟಕಕ್ಕೆ 10 ಗಂಟೆ 3 ಫೇಸ್ ವಿದ್ಯುತ್ ನೀಡಲು ನಿರ್ಧರಿಸಲಾಯಿತು. ದಿನದ ಉಳಿದ ಅವಧಿ ಸಿಂಗಲ್ ಫೇಸ್ ವಿದ್ಯುತ್ ನೀಡು ವುದಾಗಿ ಎಂಜಿನಿಯರ್ ಭರವಸೆ ನೀಡಿದರು. ಚಿಕ್ಕಮಗಳೂರು ಮತ್ತು ಬಾಳೆಹೊನ್ನೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದು ಏಪ್ರಿಲ್ ಮೊದಲ ವಾರದಿಂದ ಕಳಸಕ್ಕೆ  ವೋಲ್ಟೇಜ್ ಸಮಸ್ಯೆ ಇರದು ಎಂದೂ ಅವರು ಆಶ್ವಾಸನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.