ADVERTISEMENT

ಕಾರ್ಮಿಕರಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 9:35 IST
Last Updated 4 ಮಾರ್ಚ್ 2012, 9:35 IST

ಮಂಗಳೂರು: ರಾಜ್ಯದ ಬಹು ಸಂಖ್ಯಾತ ಕಾರ್ಮಿಕರನ್ನು ರಾಜ್ಯ ಸರ್ಕಾರ ಅನೇಕ ವರ್ಷಗಳಿಂದ ನಿರ್ಲಕ್ಷಿಸುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಾದರೂ, ಸೂಕ್ತ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಮೀಸಲಿಡಲಿ ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ.ವಿಶ್ವನಾಥ್ ಶೆಟ್ಟಿ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆಂದೇ ಪ್ರತ್ಯೇಕ ಬಜೆಟ್ ಮಂಡಿಸಿ ಖ್ಯಾತಿ ಪಡೆದಿತ್ತು. ಅದರಂತೆ ಕಾರ್ಮಿಕರೂ ರಾಜ್ಯದಲ್ಲೇ ಬಹುಸಂಖ್ಯಾತರೇ ಇದ್ದಾರೆ ಎಂಬುದನ್ನು ಮನಗಂಡು, ಕಾರ್ಮಿಕರ ಸ್ಥಿತಿ-ಗತಿ ಉತ್ತಮಗೊಳಿಸಲು ಮುಂದಾಗಲಿ. ಈ ಬಾರಿಯ ಬಜೆಟ್‌ನಲ್ಲಿ ಕಾರ್ಮಿಕರಿಗೆಂದೇ ಪ್ಯಾಕೇಜ್ ಘೋಷಿಸಲಿ ಎಂದು ಒತ್ತಾಯಿಸಿದರು.

ಬೇಡಿಕೆಗಳು: ರಾಜ್ಯದಲ್ಲಿನ ಸಂಘಟಿತ, ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡುವಂತೆ ಬಜೆಟ್‌ನಲ್ಲಿ ಘೋಷಿಸಬೇಕು. 2013ರ ನಂತರ ಹೊರಗುತ್ತಿಗೆ ಪದ್ಧತಿ ಮುಂದುವರೆಸದಂತೆ ಕ್ರಮ ವಹಿಸಬೇಕು. ಅಸಂಘಟಿತ ವರ್ಗದ ಕಾರ್ಮಿಕರಿಗೂ ಭವಿಷ್ಯ ನಿಧಿ, ನಿವೃತ್ತಿ ವೇತನ, ವಿಮೆ ಸೌಲಭ್ಯಗಳನ್ನು ಮೀಸಲಿಡಬೇಕು. ವಿವಿಧ ಸಬ್ಸಿಡಿಗಳನ್ನು ನೀಡಬೇಕು.

ಗ್ರಾಮ ಪಂಚಾಯಿತಿ, ಪುರಸಭೆ, ಜಲಮಂಡಳಿಗಳಲ್ಲಿ ದಿನಗೂಲಿ ಹಾಗೂ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕನಿಷ್ಠ ವೇತನ, ಪಿಂಚಣಿ, ನೀಡಬೇಕು.

ಅಂಗನವಾಡಿ ಶಿಕ್ಷಕಿಯರು, ಸಹಾಯಕರು, ಆಶಾ ಕಾರ್ಯಕರ್ತರನ್ನು ಸರ್ಕಾರದ ನೌಕರರೆಂದು ಪರಿಗಣಿಸಿ ಕಾಯಂ ಗೊಳಿಸಬೇಕು. ಇವರಿಗೆ ನಿವೃತ್ತಿ ನಂತರ 50 ಸಾವಿರ ರೂಪಾಯಿಗಳ ಅನುಗ್ರಹರಾಶಿ ನೀಡಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ 1500 ರೂಪಾಯಿ, ಸಹಾಯಕಿಯರಿಗೆ 1250 ರೂಪಾಯಿ ಪಿಂಚಣಿ ನೀಡಬೇಕು. ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ನೀಡಬೇಕು.

ಅಸಂಘಟಿತ ಕ್ಷೇತ್ರದ ಮತ್ತು ಷೆಡ್ಯೂಲ್ ಉದ್ದಿಮೆಗಳಲ್ಲಿ ಕನಿಷ್ಠ ವೇತನ ಪಡೆಯುವ ಕಾರ್ಮಿಕರಿಗೆ ನಿವೇಶನ ಮತ್ತು ಮನೆ ಕಟ್ಟಲು ಸಾಲ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಲು ರಿಯಾಯಿತಿ ನೀಡಬೇಕು. ಕಾರ್ಖಾನೆ ಮುಚ್ಚಿ ಹೋದಲ್ಲಿ ಕಾರ್ಮಿಕರಿಗೆ ಬೇರೆಡೆ ಕೆಲಸ ಸಿಗುವವರೆಗೂ ನಿರುದ್ಯೋಗ ಭತ್ಯೆ ನೀಡಬೇಕು. ಪಡಿತರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಹಣ್ಣು- ತರಕಾರಿ ಮಾರಾಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಠಲ ದಾಸ್, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ದಕ್ಷಿಣ ಕನ್ನಡ ಆಶಾ ಕಾರ್ಯಕರ್ತರ ಸಂಘದ ಅಧ್ಯಕ್ಷ ವಿಜಯಲಕ್ಷ್ಮಿ, ರಾಷ್ಟ್ರೀಯ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಯು. ಪ್ರಭಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.