ADVERTISEMENT

ಕಾರ್ಮಿಕ-ಮಾಲಿಕರ ಸಮಾವೇಶ ಮೇ 1ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 6:10 IST
Last Updated 21 ಏಪ್ರಿಲ್ 2012, 6:10 IST

ಮಂಗಳೂರು: ಕಾರ್ಮಿಕ ದಿನಾಚರಣೆ ಪ್ರಯುಕ್ತ ಮೇ 1ರಂದು ಲಾಲ್‌ಬಾಗ್‌ನ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕರ ಮತ್ತು ಮಾಲಿಕರ ಸಮಾವೇಶ ನಡೆಯಲಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ ತಿಳಿಸಿದ್ದಾರೆ.

ಸಮಾವೇಶದ ಪ್ರಯುಕ್ತ ಇದೇ 22ರಂದು ಬೆಳಿಗ್ಗೆ 10ರಿಂದ ನೆಹರೂ ಮೈದಾನದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಕಾರ್ಮಿಕರಿಗಾಗಿ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ರೀಡೋತ್ಸವದಲ್ಲಿ ಎಲ್ಲಾ ಕಾರ್ಮಿಕರೂ ಪಾಲ್ಗೊಳ್ಳಬಹುದು. ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಬಡ್ಡಿ, ಹಗ್ಗ ಜಗ್ಗಾಟ, 100 ಮೀಟರ್ ಓಟ, ಸಂಗೀತ ಕುರ್ಚಿ ಸಹಿತ ಹಲವು ಸ್ಪರ್ಧೆಗಳಿರುತ್ತವೆ. ಆಸಕ್ತರು ಸಂಘದ ಕಚೇರಿಯನ್ನು (0824-2481196) ಮೊದಲಾಗಿ ಸಂಪರ್ಕಿಸಬೇಕು ಎಂದು ಅವರು ತಿಳಿಸಿದರು.

ಕಾರ್ಮಿಕರ ಜತೆಗೆ ಮಾಲಿಕರನ್ನೂ ಸೇರಿಸಿಕೊಂಡು ಸೌಹಾರ್ದಯುತ ಸಂಬಂಧ ಬೆಳೆಸುವುದು ಸಂಘದ ಉದ್ದೇಶ. ಅದಕ್ಕಾಗಿ 2ನೇ ವರ್ಷದ ಕಾರ್ಮಿಕ ಮತ್ತು ಮಾಲಿಕರ ಸಮಾವೇಶ ನಡೆಯುತ್ತಿದೆ. ಮೇ 1ರಂದು ಸಂಜೆ 4ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಕೆಯ್ಯೂರು ನಾರಾಯಣ ಭಟ್, ರಾಜ್ಯ ಉಪಾಧ್ಯಕ್ಷ ಜಿ.ಎಂ. ಗಾಡ್ಕರ್, ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್, ಜಿಲ್ಲಾ ಅಧ್ಯಕ್ಷ ಸಂತೋಷ್ ಕಾವೂರು ಇತರರು ಇದ್ದರು.

ಇಎಸ್‌ಐ: ಮೇ 2ರಿಂದ  ಮತ್ತೆ ಸತ್ಯಾಗ್ರಹ
ಅಖಿಲ ಭಾರತ ಕಾರ್ಮಿಕ ಸಂಘವು ಉಪವಾಸ ಸತ್ಯಾಗ್ರಹದಂತಹ ಪ್ರತಿಭಟನೆ ನಡೆಸಿದ್ದರಿಂದಲೇ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಆದರೆ ಇನ್ನೂ ಹಲವು ಬೇಡಿಕೆಗಳು ಈಡೇರುವುದು ಬಾಕಿ ಇದೆ. ಅದಕ್ಕಾಗಿ ಮೇ 2ರಿಂದ ಮತ್ತೆ ಸತ್ಯಾಗ್ರಹ ಆರಂಭವಾಗಲಿದೆ ಎಂದು ಲೋಕೇಶ್ ಹೆಗ್ಡೆ ತಿಳಿಸಿದರು.

ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿದಾಗ ಅವರಿಗೆ ಬೆಂಬಲ ಸೂಚಿಸಿ ಅಷ್ಟೂ ದಿನ ಉಪವಾಸ ಸತ್ಯಾಗ್ರಹ ನಡೆಸಿದವರು ಸಂಘದ ಸುದತ್ತ ಜೈನ್ ಮತ್ತು ಸಂತೋಷ್ ಕಾವೂರು. ಇವರ ಈ ಸತ್ಯಾಗ್ರಹ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.