ADVERTISEMENT

ಕಾಲೊನಿ ಸಮಸ್ಯೆ: ಪರಿಹಾರಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 8:50 IST
Last Updated 26 ಜೂನ್ 2012, 8:50 IST

ಬದಿಯಡ್ಕ: `ಶೋಷಣೆ, ಅನಾರೋಗ್ಯ, ಸಾಮಾಜಿಕ ನಿರ್ಲಕ್ಷ್ಯದ ಕೀಳರಿಮೆ, ಶೈಕ್ಷಣಿಕ ಕುಸಿತ, ಆರ್ಥಿಕ ಸಮಸ್ಯೆ, ಸರ್ಕಾರಿ ಯೋಜನೆಗಳ ಬಗೆಗಿನ ಅಜ್ಞಾನ ಮೊದಲಾದ ಅನೇಕ ಸಮಸ್ಯೆಯಿಂದ ಪರಿಶಿಷ್ಟ ಜಾತಿಯ ಜನತೆ ಬಳಲುತ್ತಿದ್ದು, ಅವರನ್ನು ಈ ಸಮಸ್ಯೆ ಯಿಂದ ಮುಕ್ತರಾಗಿಸಲು ಪ್ರಯತ್ನಿಸಲಾಗು ವುದು~ ಎಂದು ಕಾಸರಗೋಡು ಜಿಲ್ಲಾ ಎಸ್‌ಪಿ ಎಸ್. ಸುರೇಂದ್ರನ್ ಹೇಳಿದರು.

ಸೋಮವಾರ ಬದಿಯಡ್ಕ ಬಿಆರ್‌ಸಿಯಲ್ಲಿ ನಡೆದ `ಪೊಲೀಸ್ ಅಧಿಕಾರಿಗಳ ಕಾಲೊನಿ ಸಂದರ್ಶನ~ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು. `ಪೊಲೀಸ್ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕಾಲೊನಿ ನಿವಾಸಿಗಳ ಮನೆ ಬಾಗಿಲಿಗೆ ಬಂದಾಗ, ಸಮಸ್ಯೆಯನ್ನು ಅಡಗಿಸದೆ ಎಲ್ಲ ವಿಚಾರಗಳನ್ನು  ಅಧಿಕಾರಿಗಳಿಗೆ ತಿಳಿಸುವ ಮೂಲಕ ಪೊಲೀಸ್ ಇಲಾಖೆಯ ಯೋಜನೆಗೆ ಸೂಕ್ತವಾಗಿ ಸ್ಪಂದಿಸಬೇಕು. ಕುಡಿತದಂತಹ ಸಾಮಾಜಿಕ ಪಿಡುಗನ್ನು ತ್ಯಜಿಸುವ ಬಗ್ಗೆ ಕಾಲೊನಿ ನಿವಾಸಿಗಳು ಜಾಗೃತರಾಗುವ ಮೂಲಕ ಮುಂದಿನ ಪೀಳಿಗೆಗೆ ಅವು ತಲುಪದಂತೆ ಜಾಗ್ರತೆ ಹಿಸಬೇಕು~ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಹಿನ್ ಕೇಳೋಟ್ ಮಾತನಾಡಿ, `ಬದಿಯಡ್ಕ ಗ್ರಾಪಂನಲ್ಲಿ ಇಂತಹ ಕಾರ್ಯಕ್ರಮಗಳು ಮೊದಲ ಬಾರಿಗೆ ನಡೆಯುತ್ತಿದ್ದು, ಸುಮಾರು 44 ಪರಿಶಿಷ್ಟ ಜಾತಿ ಹಾಗೂ 6 ಪರಿಶಿಷ್ಟ ವರ್ಗದ ಕಾಲೊನಿ ಸಮಸ್ಯೆಯಲ್ಲಿದ್ದು, ಅವರ ಸಮಸ್ಯೆಗೆ ಸ್ಪಂದಿಸುವ ಅಗತ್ಯವಿದೆ~ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ಬಾರಡ್ಕ ಹಾಗೂ ಕನಕಪ್ಪಾಡಿಯ ಪರಿಶಿಷ್ಟ ಜಾತಿ ಕಾಲೊನಿಗಳನ್ನು ಸಂದರ್ಶಿಸಿದರು. ಕಾರ್ಯಕ್ರಮದಲ್ಲಿ ಎಎಸ್‌ಪಿ ಟಿ.ಕೆ. ಶಿಬು, ಬದಿಯಡ್ಕ ಪೊಲೀಸ್ ಠಾಣೆಯು ವೃತ್ತ ನಿರೀಕ್ಷಕ ಶ್ರೀಧರನ್, ಮುಳ್ಳೇರಿಯಾ, ಬದಿಯಡ್ಕ ಗ್ರಾಪಂ ಸದಸ್ಯರಾದ ಹಮೀದ್ ಪಳ್ಳತ್ತಡ್ಕ, ಪದ್ಮಲತಾ ಶೆಟ್ಟಿ, ಶಾರದಾ, ಪ್ರೇರಕ್ ನಾರಾಯಣ ಬಾರಡ್ಕ ಇದ್ದರು.

ಈ ಸಂದರ್ಭದಲ್ಲಿ ಕಾಲೊನಿ ನಿವಾಸಿಗಳ ಸಮಸ್ಯೆಗಳನ್ನು ಡಿಎಸ್‌ಪಿ ಎಸ್.ಸುರೇಂದ್ರನ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ವಿಮರ್ಶಿಸಿ ಪರಿಹರಿಸಲು ಯೋಜನೆ ರೂಪಿಸಲಾಯಿತು.

ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ವಾಟರ್ ಅಥಾರಿಟಿ, ಪರಿಶಿಷ್ಟ ವರ್ಗ ಅಭಿವೃದ್ಧಿ ಸಮಿತಿ ಅಧಿಕಾರಿಗಳು, ಸರ್ಕಾರಿ ಶಾಲಾ ಮುಖ್ಯಸ್ಥರು, ಗ್ರಾಪಂ ಪ್ರತಿನಿಧಿಗಳು ಭಾಗವಹಿಸಿದ್ದರು. ವಿವಿಧ ಇಲಾಖೆಗಳ ಸಮಸ್ಯೆಗಳ ಬಗ್ಗೆ ಕಾಲೊನಿ ನಿವಾಸಿಗಳು ಕಾರ್ಯಕ್ರಮದಲ್ಲಿ  ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.