ADVERTISEMENT

ಕಾಸರಗೋಡು: ಇನ್ನೂ 3 ಟ್ಯಾಂಕರ್ ಪತ್ತೆ

ಒಮಾನ್‌ನಲ್ಲಿ ಮುಳುಗಿದ ಹಡಗಿನ ಅವಶೇಷವೇ?

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 8:54 IST
Last Updated 25 ಜುಲೈ 2013, 8:54 IST
ಕಾಸರಗೋಡಿನ ಉದುಮದಲ್ಲಿ ಬುಧವಾರ ಪತ್ತೆಯಾದ ಟ್ಯಾಂಕರ್.
ಕಾಸರಗೋಡಿನ ಉದುಮದಲ್ಲಿ ಬುಧವಾರ ಪತ್ತೆಯಾದ ಟ್ಯಾಂಕರ್.   

ಕಾಸರಗೋಡು: ಜಿಲ್ಲೆಯ ಸಮುದ್ರ ತೀರಕ್ಕೆ ಬುಧವಾರ ಇನ್ನೂ 2 ಟ್ಯಾಂಕರ್‌ಗಳು ಅಪ್ಪಳಿಸಿವೆ. ಉದುಮ ಕಡಪ್ಪುರ ಮತ್ತು ಕೋಟಿಕುಳದ ಕುರುಂಬ ಕಡಪ್ಪುರದಲ್ಲಿ ಟ್ಯಾಂಕರ್‌ಗಳು ಪತ್ತೆಯಾಗಿವೆ. ಮಂಗಳವಾರ ಮಧ್ಯಾಹ್ನ ಕುಂಬಳೆ ಬೇರಿಕೆ ಕಡಪ್ಪುರದಲ್ಲಿ ಭಾರಿ ಗಾತ್ರದ ಟ್ಯಾಂಕರ್ ದಡದಲ್ಲಿ ಪತ್ತೆಯಾಗಿತ್ತು.

ಇದರಲ್ಲಿ ಮೂರು ಟ್ಯಾಂಕರ್‌ಗಳು ವ್ಯವಸ್ಥಿತವಾಗಿ ಜೋಡಿಸಿದ ಸ್ಥಿತಿಯಲ್ಲಿದ್ದವು. ಈ ಪೈಕಿ  ಒಂದು ಟ್ಯಾಂಕರ್ ಖಾಲಿ ಇದೆ. ಈ ಮೂರೂ ಟ್ಯಾಂಕರ್‌ಗಳು 7ಮೀ ಉದ್ದವಿದ್ದು, 24 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದವು.

ಮಂಗಳವಾರ ರಾತ್ರಿ 7.45ರ ಹೊತ್ತಿಗೆ ಕಾಸರಗೋಡಿನ ಕೊಯಿಪ್ಪಾಡಿ ಕೊಪ್ಪಳ ಕಡಪ್ಪುರದಲ್ಲೂ ಟ್ಯಾಂಕರ್ ಸಮುದ್ರ ತೀರ ಸೇರಿದೆ. ಈ ಟ್ಯಾಂಕರ್ 24,300 ಲೀ. ಸಾಮರ್ಥ್ಯ ಹೊಂದಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 6 ಟ್ಯಾಂಕರ್‌ಗಳು ದಡ ಸೇರಿದಂತಾಗಿದೆ.

ಬುಧವಾರ ಉದುಮ ಕಡಪ್ಪುರ ಮತ್ತು ಕೋಟಿಕುಳದ ಕುರುಂಬ ಕಡಪ್ಪುರದಲ್ಲಿ ತಲಾ ಒಂದೊಂದು ಟ್ಯಾಂಕರ್ ಸಮುದ್ರದ ಮರಳಿನಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗೆ ಬೆಲೆಬಾಳುವ ಫುಟ್ಬಾಲ್ ಮತ್ತು ಎಲೆಕ್ಟ್ರಾನಿಕ್ ಸಾಮಗ್ರಿಗಳು ಸಮುದ್ರದ ದಡ ಸೇರಿದ್ದವು. ಈ ಸಾಮಗ್ರಿಗಳನ್ನು ಪಡೆದು ಸಂತುಷ್ಟರಾಗಿದ್ದ ತೀರ ನಿವಾಸಿಗಳು ಟ್ಯಾಂಕರ್ ಪ್ರವೇಶದಿಂದ ಆತಂಕಗೊಂಡಿದ್ದಾರೆ.

ಟ್ಯಾಂಕರ್ ಒಳಗೆ ಶೈತ್ಯಾಗಾರಕ್ಕೆ ಬಳಸುವ ಅನಿಲ ಇದೆ ಎಂದು ಬಾಂಬ್ ಪತ್ತೆ ದಳ ಶಂಕಿಸಿದೆ. ಕೊಚ್ಚಿಯಿಂದ ನಾವಿಕ ಸೇನೆ, ಭಾರತೀಯ ತೈಲ ನಿಗಮದ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸ್ಥಳೀಯ ಮೀನುಗಾರರ ಆತಂಕ ಮುಗಿಲು ಮುಟ್ಟಿದೆ. ಆದರೆ ಟ್ಯಾಂಕರ್‌ಗಳನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ.

ಒಮಾನ್‌ನಲ್ಲಿ ಮುಳುಗಿದ ಹಡಗಿನ ಅವಶೇಷ?:
ಒಮಾನ್‌ನಲ್ಲಿ ಇತ್ತೀಚೆಗೆ ಮುಳುಗಿದ ಹಡಗಿನಿಂದ ಹೊರಬಿದ್ದ ಸಾಮಗ್ರಿಗಳೇ ಜಿಲ್ಲೆಯ ಸಮುದ್ರ ಸೇರಿದೆ ಎಂಬ ಮಾಹಿತಿ ಲಭಿಸಿದೆ.
ಲಕ್ಷದ್ವೀಪದಲ್ಲೂ ಇದೇ ಮಾದರಿಯ ಸಾಮಗ್ರಿಗಳು ದಡ ಸೇರಿವೆ. ಜೂನ್ 17ರಂದು ಸಿಂಗಾಪುರದಿಂದ ಉತ್ತರ ಯುರೋಪಿಗೆ ತೆರಳಿದ್ದ ಎಂ.ವಿ.ಮೋಲ್ ಕಂಫರ್ಟ್ ಎಂಬ ಹಡಗು ಒಮಾನ್‌ನ ಸಲಾಲ ಭಾರತೀಯ ಸಮುದ್ರದಲ್ಲಿ ಮುಳುಗಿ ನುಚ್ಚುನೂರಾಗಿತ್ತು.

ಈ ಹಡಗಿನ ಸಾಮಗ್ರಿಗಳೇ ಕರಾವಳಿಯ ದಡಕ್ಕೆ ಅಪ್ಪಳಿಸುತ್ತಿವೆ. 4,382 ಟ್ಯಾಂಕರ್‌ಗಳು (ಕಂಟೈನರ್) ಈ ಹಡಗಿನಲ್ಲಿದ್ದವು. ಇದರಲ್ಲಿ ಬಹುತೇಕ ಟ್ಯಾಂಕರ್‌ಗಳನ್ನು ಸುರಕ್ಷಿತವಾಗಿ ಮೇಲೆತ್ತಲಾಗಿತ್ತು. ಉಳಿದವುಗಳು ಸಮುದ್ರದಲ್ಲಿ ಚದುರಿ ಹೋಗಿವೆ.

ಒಮಾನಿನ ಸಲಾಲ ಎಂಬಲ್ಲಿಂದ 430 ನಾಟಿಕಲ್ ಮೈಲು ದೂರದಲ್ಲಿ ಹಡಗು ಮುಳುಗಿತ್ತು. ಈ ಹಡಗಿನಲ್ಲಿ 11 ರಷ್ಯನರು, 14 ಫಿಲಿಫ್ಫೈನ್, ಉಕ್ರೈನ್‌ನ ಒಬ್ಬ ನಿವಾಸಿ ಸಹಿತ 26 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಇವರು ಪ್ರಾಣಾಪಾಯದಿಂದ ಪಾರಾಗಿದ್ದರು. ಟ್ಯಾಂಕರ್‌ಗಳ ಭಾರದಿಂದ ಹಡಗು ಇಬ್ಭಾಗವಾಗಿ ಮುರಿದಿತ್ತು ಎನ್ನಲಾಗಿದೆ.

ADVERTISEMENT

1600 ಮೆಟ್ರಿಕ್ ಟನ್ ಇಂಧನ ಹಡಗಿನಲ್ಲಿತ್ತು. ಜುಲೈ 13ರಂದು ಮುಳುಗಿದ ಹಡಗಿನಿಂದ ಸಾಮಗ್ರಿಗಳನ್ನು ಹೊರತೆಗೆಯುವ ಕಾರ್ಯ ಮುಗಿದಿತ್ತು. ಮುಳುಗಿದ ಹಡಗಿಗೆ 7.9ಬಿಲಿಯನ್ ಜಪಾನ್ ಯೆನ್ ವಿಮೆ ಮಾಡಲಾಗಿತ್ತು. ಮಟ್ಸೂಯಿ ಎಸ್.ಕೆ. ಲೈನ್ ಎಂಬ ಕಂಪೆನಿಯ ಹಡಗು ಇದಾಗಿತ್ತು. ಲಕ್ಷದ್ವೀಪದ ಕಡಮಟ್ ದ್ವೀಪದಲ್ಲಿ ಹಡಗಿನ ಅವಶೇಷಗಳು ದಡ ಸೇರಿದೆ ಎಂದು ಅಲ್ಲಿನ ಡಿಐಜಿ ಸತೀಶ್ಚಂದ್ರನ್ ತಿಳಿಸಿದ್ದಾರೆ.

ತಜ್ಞರು ತಪಾಸಣೆ ಮಾಡಿದ ಬಳಿಕ ಟ್ಯಾಂಕರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಕರಾವಳಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.