ADVERTISEMENT

ಕುಕ್ಕೆ ಸುಬ್ರಹ್ಮಣ್ಯನಿಗಿಲ್ಲ ಸೂಕ್ತ ಭದ್ರತೆ!

ರಾಜ್ಯದ ಶ್ರೀಮಂತ ದೇವಸ್ಥಾನ

ಲೋಕೇಶ್ ಸುಬ್ರಹ್ಮಣ್ಯ
Published 7 ಜನವರಿ 2015, 6:12 IST
Last Updated 7 ಜನವರಿ 2015, 6:12 IST
ಮೂಲಸೌಕರ್ಯ ವಂಚಿತ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್‌ ಠಾಣೆ.
ಮೂಲಸೌಕರ್ಯ ವಂಚಿತ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್‌ ಠಾಣೆ.   

ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಯ ಕುಕ್ಕೆ ಸುಬ್ರಹ್ಮಣ್ಯ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಭದ್ರತೆ ಕಲ್ಪಿಸುವ ಹೊಣೆ ಹೊತ್ತುಕೊಂಡಿರುವ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಅಗತ್ಯದ ಸಿಬ್ಬಂದಿ ಕೊರತೆ ಸಹಿತ ಮೂಲಸೌಕರ್ಯ ಸಮಸ್ಯೆ ಸಾಮಾನ್ಯ ಸಂಗತಿಯಾಗಿದೆ.

ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ನಾಗಾರಾಧನೆಯ ಮೂಲ ಕ್ಷೇತ್ರವಾದ  ಇಲ್ಲಿಗೆ ರಜಾ ದಿನಗಳಲ್ಲಿ, ವಿಶೇಷ ದಿನಗಳಲ್ಲಿ ಭಕ್ತರು ಬರುವುದನ್ನು ಕಂಡಾಗ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವುದೇ ಸವಾಲಿನ ಸಂಗತಿಯಾಗಿ­ಬಿಡುತ್ತದೆ. ಹೀಗೆ ಸಾವಿರಗಟ್ಟಲೆಯಲ್ಲಿ ಬರುವ ಭಕ್ತರಿಗೆ ಸೂಕ್ತ ರಕ್ಷಣೆ ಸಹಿತ ದೇವಸ್ಥಾನದ ಆಸ್ತಿ, ಪಾಸ್ತಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲದಿರುವುದು ಸ್ಪಷ್ಟವಾಗಿದೆ.

ದೇವಳ ವ್ಯಾಪ್ತಿಯ ಒಳಾಂಗಣ ಮತ್ತು ಹೊರಾಂಗಣ ವ್ಯಾಪ್ತಿಯ ಕೆಲವೆಡೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ದೇವಳದ ಮುಂಭಾಗದ ರಥ ಬೀದಿ, ದೇವಳದ ಪ್ರವೇಶ ದ್ವಾರ ಇತ್ಯಾದಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ.ಕ್ಯಾಮೆರಾ ಸೇರಿದಂತೆ ಇತರ ಭದ್ರತಾ ವ್ಯವಸ್ಥೆಗಳೇ ಇಲ್ಲ. ದೇವಳಕ್ಕೆ ಹೆಚ್ಚುವರಿ ಸಿ.ಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಟೆಂಡರು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಇದು ಸೂಕ್ತವಾಗಿ ಅನುಷ್ಠಾನಕ್ಕೆ ಬರುವ ತನಕ ಭದ್ರತಾ ಸಮಸ್ಯೆ ಹಾಗೆಯೇ ಉಳಿದುಕೊಂಡಿರುತ್ತದೆ. ಹೆಚ್ಚುವರಿ ಸಿ.ಸಿ ಕ್ಯಾಮೆರಾ ಅಳವಡಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಇನ್ನೂ ಅದು ಪೂರ್ಣಗೊಳ್ಳದೆ ಇರುವುದು ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಕ್ಕೆ ಶೋಭೆಯಲ್ಲ ಎಂದೇ ಹೇಳಲಾಗುತ್ತಿದೆ.

ಸುಬ್ರಹ್ಮಣ್ಯ ಠಾಣೆಯಲ್ಲಿ ಸಿಬ್ಬಂದಿ ಸೇರಿದಂತೆ ಹಲವಾರು ಕೊರತೆ ಇದೆ. ಇಲ್ಲಿ ಮುಖ್ಯವಾಗಿ ಹೆಚ್ಚುವರಿ ಠಾಣಾಧಿಕಾರಿ, ಉಪಠಾಣಾಧಿಕಾರಿಗಳೇ ಇಲ್ಲ. ಕಾನ್‌ಸ್ಟೆಬಲ್‌ಗಳ ಸಂಖ್ಯೆಯೂ ಕಡಿಮೆ ಇದೆ. ಈ ಠಾಣೆಯ ವ್ಯಾಪ್ತಿ 212 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಸುಬ್ರಹ್ಮಣ್ಯ, ಐನೆಕಿದು, ಏನೆಕಲ್, ಬಳ್ಪ, ಕೇನ್ಯ, ಪಂಜ, ನಿಂತಿಕಲ್, ಕಲ್ಮಡ್ಕ, ಪಂಬೆತ್ತಾಡಿ, ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ, ದೇವಚಳ್ಳ, ಐವತ್ತೊಕ್ಲು, ಕೂತ್ಕುಂಜ, ನಾಲ್ಕೂರು, ಗುತ್ತಿಗಾರು, ಎಡಮಂಗಲ ಸೇರಿದಂತೆ ಸುಮಾರು 19ಗ್ರಾಮಗಳು ಈ ಠಾಣಾ ವ್ಯಾಪ್ತಿಗೆ ಬರುತ್ತವೆ. ಸಿಬ್ಬಂದಿಗೆ ಸೂಕ್ತ ಶಸ್ತ್ರಾಸ್ತ್ರಗಳು ಇಲ್ಲ.

ದೇಶದ ನಾನಾ ಭಾಗಗಳಿಂದ ಸಾವಿರಾರು ಯಾತ್ರಿಕರು ಬರುವ ಸುಬ್ರಹ್ಮಣ್ಯದಲ್ಲಿ ಭಕ್ತರ ಜೀವ, ಆಸ್ತಿಪಾಸ್ತಿ ರಕ್ಷಣೆಗೂ ಅತಿ ಹೆಚ್ಚಿನ ಗಮನ ಹರಿಸಬೇಕಾಗಿರುವುದರಿಂದ ಠಾಣೆಯನ್ನು ಸಿಬ್ಬಂದಿ, ತಾಂತ್ರಿಕ ಪರಿಕರಗಳೊಂದಿಗೆ ಸಜ್ಜಾಗಿ ಇಡುವ ಅಗತ್ಯ ಇದೆ ಎಂಬ ಮಾತು ಕೇಳಿಬಂದಿದೆ.

ರೈಲ್ವೆ ಪ್ರಯಾಣಿಕರು: ಈಚೆಗೆ ಚೆನ್ನೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬ ಸುಬ್ರಹ್ಮಣ್ಯ ರೋಡ್‌ ಸ್ಟೇಷನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಒಂದು ರೀತಿಯ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.

ಉಗ್ರರ ಗುರಿ ಏನಿದ್ದರೂ ಜನನಿಬಿಡ ಪ್ರದೇಶಗಳು. ಈಚೆಗೆ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಇದನ್ನು ಪುಷ್ಟೀಕರಿಸಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹ ರಜಾ ದಿನಗಳಲ್ಲಿ, ವಿಶೇಷ ದಿನಗಳಲ್ಲಿ ಕಿಕ್ಕಿರಿದ ಸಂಖ್ಯೆಯಲ್ಲಿ ಬರುವ ಭಕ್ತರನ್ನು ಕಂಡಾಗ ಇಲ್ಲಿನ ಭದ್ರತಾ ಲೋಪಗಳ ಬಗ್ಗೆ ಆತಂಕ ಉಂಟಾಗದೆ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.