ADVERTISEMENT

ಕುದ್ರೋಳಿಯಲ್ಲಿ ಬೆಳಕಿನ ವೈಭವ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:25 IST
Last Updated 22 ಅಕ್ಟೋಬರ್ 2012, 7:25 IST
ಕುದ್ರೋಳಿಯಲ್ಲಿ ಬೆಳಕಿನ ವೈಭವ
ಕುದ್ರೋಳಿಯಲ್ಲಿ ಬೆಳಕಿನ ವೈಭವ   

ಮಂಗಳೂರು: ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ದಸರಾ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, ಭಾನುವಾರ ಸಂಜೆ ಮಳೆ ಸುರಿಯುತ್ತಿದ್ದರೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕೊಡೆ ಹಿಡಿದುಕೊಂಡೇ ದೇವಸ್ಥಾನದ ಬೆಳಕಿನ ವೈಭವವನ್ನು ಕಣ್ತುಂಬಿಕೊಂಡರು.

ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು, ಅಲಂಕಾರಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಶನಿವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಮಹಾ ಅನ್ನಸಂತರ್ಪಣೆ ಭಾನುವಾರ ನಸುಕಿನ 2.15ರವರೆಗೂ ಮುಂದುವರಿದಿತ್ತು. 50 ಸಾವಿರಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದ್ದರು.

ಕುದ್ರೋಳಿ ದೇವಸ್ಥಾನದ ಇತಿಹಾಸ, ಪರಂಪರೆ, ವೈಭವವನ್ನು ಪ್ರತಿಬಿಂಬಿಸುವ ಸಾಕ್ಷ್ಯಚಿತ್ರವನ್ನು ಒಳಗೊಂಡ ಡಿವಿಡಿಯನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಭಾನುವಾರ ರಾತ್ರಿ ಬಿಡುಗಡೆ ಮಾಡಿದರು.
ಆಕರ್ಷಕ ವಿದ್ಯುತ್ ದೀಪಾಲಂಕಾರ ದೇವಸ್ಥಾನದ ಮೂಲೆ ಮೂಲೆಯಲ್ಲೂ ಬೆಳಗುತ್ತಿದ್ದು, ದೇವಸ್ಥಾನದ ಕೆರೆಯಲ್ಲಿ ಸಂಜೆ ಚಿಮ್ಮುವ ಕಾರಂಜಿ ವಿದ್ಯುತ್ ದೀಪಗಳ ಅಲಂಕಾರಕ್ಕೆ ಇನ್ನಷ್ಟು ಮೆರುಗು ನೀಡುತ್ತಿದೆ.

ಸೋಮವಾರ ಬೆಳಿಗ್ಗೆ ಚಂಡಿಕಾಹೋಮ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಮಧ್ಯೆ, ಬುಧವಾರ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಹಲವೆಡೆ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ವರ್ಷದಿಂದ ವರ್ಷಕ್ಕೆ ಸ್ತಬ್ಧಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮೆರವಣಿಗೆಗೆ ಇನ್ನಷ್ಟು ವೈಭವ ನೀಡುವ ರೀತಿಯಲ್ಲಿ ಅವುಗಳನ್ನು ವಿಶಿಷ್ಟವಾಗಿ ರಚಿಸುವ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.