ADVERTISEMENT

ಕುಮಾರಸ್ವಾಮಿ ಶಾಲೆಯಲ್ಲಿ ತೆರೆದಿದೆ ಗೋಶಾಲೆ!

ಸುಬ್ರಹ್ಮಣ್ಯ: ವಿದ್ಯೆ ಕಲಿಯುವ ಚಿಣ್ಣರಿಗೂ ಗೋಸಾಕಣೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 11:02 IST
Last Updated 8 ಫೆಬ್ರುವರಿ 2013, 11:02 IST
ಗೋ ಶಾಲೆಯನ್ನು ಸ್ಥಳೀಯ ಹೈನುಗಾರ ರವೀಂದ್ರ ಕುಮಾರ್ ರುದ್ರಪಾದ ಇತ್ತೀಚೆಗೆ ಉದ್ಘಾಟಿಸಿದರು.
ಗೋ ಶಾಲೆಯನ್ನು ಸ್ಥಳೀಯ ಹೈನುಗಾರ ರವೀಂದ್ರ ಕುಮಾರ್ ರುದ್ರಪಾದ ಇತ್ತೀಚೆಗೆ ಉದ್ಘಾಟಿಸಿದರು.   

ಸುಬ್ರಹ್ಮಣ್ಯ: ಶಿಕ್ಷಣ ಸಂಸ್ಥೆಯೊಂದು ಜ್ಞಾನಾರ್ಜನೆಯೊಂದಿಗೆ ಬಾಲ್ಯದಲ್ಲೇ ಮಕ್ಕಳಲ್ಲಿ ಗೋರಕ್ಷಣೆ, ಹೈನುಗಾರಿಕೆ, ಪಶುಪಾಲನೆಯ ಮಹತ್ವದ ಕುರಿತು  ತಿಳಿವಳಿಕೆ ಮೂಡಿಸುವ ವಿನೂತನ ಪ್ರಯತ್ನದಲ್ಲಿ ತೊಡಗಿದೆ. ಶಿಕ್ಷಣ ಸಂಸ್ಥೆ ಜೊತೆ ಗೋವು ಸಾಕುವ ಕಾರ್ಯದಲ್ಲಿ ತೊಡಗಿ ಗೋ ಶಾಲೆ ನಿರ್ಮಿಸಿರುವುದನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ  ಕಾಣಬಹುದು.

ರಾಘವೇಶ್ವರ ಸ್ವಾಮೀಜಿ ಅವರ ಪ್ರೇರಣೆಯಿಂದ ಇದನ್ನು ಕಾರ್ಯಗತಗೊಳಿಸಲಾಗಿದೆ. ಕೃಷಿ ಪ್ರಧಾನ ನಾಡಿನಲ್ಲಿ ಕೃಷಿಗೆ ಒತ್ತು ನೀಡುವ ಕಾರ್ಯ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದ್ದು ಕೈಗಾರಿಕೀಕರಣದ ಕಡೆ ಹೆಚ್ಚು ಗಮನ ನೀಡಲಾಗುತ್ತಿದೆ. ಹೀಗಾಗಿ ಸ್ಥಳಿಯ ಹಾಲು, ಮೊಸರು ಇತ್ಯಾದಿ ಆರೋಗ್ಯಕ್ಕೆ ಹಿತಕರವಾದ ಆಹಾರ ಸೇವನೆ ಇಳಿಮುಖವಾಗುತ್ತಿದೆ. ಮಾರುಕಟ್ಟೆಯ ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ಥೆಯೊಂದು ಪ್ರಾಚೀನ ಹೈನುಗಾರಿಕೆ, ಕೃಷಿ ಚಟುವಟಿಕೆ ಗೋ ರಕ್ಷಣೆಯ ಕುರಿತಾದ ಜ್ಞಾನ ಮಕ್ಕಳಲ್ಲಿ ಮೂಡಬೇಕು ಎಂಬ ತತ್ವದಿಂದ ಗೋಶಾಲೆ ತೆರಯುವುದಕ್ಕೆ ಮುಂದಾಗಿದೆ.

ADVERTISEMENT

ನೂತನ ಗೋಶಾಲೆ ಸುಂದರವಾಗಿ ರಚನೆಗೊಂಡಿದೆ. ಆರಂಭದಲ್ಲಿ ಎರಡು ದನಗಳನ್ನು ಸಾಕಲಾಗುತ್ತಿದೆ. ಈ ಗೋವುಗಳಿಗೆ ಆಹಾರ ಪೂರೈಕೆಗಾಗಿ ಇಲ್ಲಿಯೇ ಹುಲ್ಲು ಬೆಳೆಸಲಾಗುತ್ತಿದೆ.

ಇವುಗಳ ಲಾಲನೆ ಪಾಲನೆಗಾಗಿ ಒಬ್ಬರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಸ್ಥಳೀಯ ಎಲಿಯಾರ್ ವಿಶ್ವೇಶ್ವರ ಭಟ್ ಎಂಬ ಕೃಷಿಕ ಯೋಜನೆಗೆ ಪ್ರೋತ್ಸಾಹವಾಗಿ ಸುಮಾರು 30ಸಾವಿರ ಮೌಲ್ಯದ ಗಿರ್ ತಳಿಯ ಗೋವನ್ನು ದಾನವಾಗಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.