ಮಂಗಳೂರು: ಕವಿತೆ ಬರೆದ ಕಾರಣಕ್ಕೆ ಕಾಡು ಪಾಲಾದ ಗುಣಾಢ್ಯ, ಹೊಲೆಯನಾದರೂ ಶಾಸ್ತ್ರವನ್ನೋದುವ ಹಂಬಲ ಹೊಂದಿದ್ದ ಶಂಭೂಕನನ್ನು ಕೊಂದ ಶ್ರೀರಾಮ, ಕುಲೀನನಲ್ಲದ ಕರ್ಣನಿಗೆ ಬಿಲ್ವಿದ್ಯೆಯ ಚಾತುರ್ಯ ಪ್ರದರ್ಶಿಸಲು ಅವಕಾಶ ಕೊಡದ, ಅರ್ಜುನನ ಪಾರಮ್ಯಕ್ಕಾಗಿ ಏಕಲವ್ಯನ ಹೆಬ್ಬರಳನ್ನೇ ಬಲಿ ಪಡೆದ ಮಹಾಭಾರತದ ದ್ರೋಣ, ಹಾಡು ನೃತ್ಯಕ್ಕೆ ಒಲಿದು ಹೊಲೆಯರಿಗೆ ಮಾತುಕೊಟ್ಟು ಬಳಿಕ ಮದುವೆಯಾಗಲೊಲ್ಲದ ಸತ್ಯಹರಿಶ್ಚಂದ್ರ, ಕುಲದವನಲ್ಲದ ಕನಕನದಾಸರಿಗೆ ಉಡುಪಿ ಶ್ರೀಕೃಷ್ಣನ ದರ್ಶನ ನಿರಾಕರಿಸಿದ ಬ್ರಾಹ್ಮಣರು,..... ಕುಲದ ವಿಚಾರದಲ್ಲಿ ಹೊಲೆಯರಿಗೆ ಅನ್ಯಾಯವೆಸಗಿದ ಅಷ್ಟೂ ಪ್ರಸಂಗಗಳು ಇತಿಹಾಸದ ಪುಟಗಳಿಂದ ಎದ್ದು ಬಂದು ಕಣ್ಮುಂದೆ ಪ್ರತ್ಯಕ್ಷವಾದವು.
ಅನಾದಿಕಾಲದಿಂದಲೂ ಜಾತಿಯ ಹೆಸರಿನಲ್ಲಿ ನಡೆದ ಕ್ರೌರ್ಯಗಳ ಒಂದೊಂದೇ ಉದಾಹರಣೆಗಳನ್ನೆ ಹೆಕ್ಕಿ ತೆಗೆದ ‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕವು, ಜನರ ಮನದ ಮೂಲೆಯಲ್ಲಿ ಅವಿತಿದ್ದ ಕುಲದ ಕತ್ತಲೆಯನ್ನು ಕಳೆಯುವ ಬೆಳಕಾಗಿ ಧ್ವನಿ, ಬೆಳಕು, ಹಾಡು, ನೃತ್ಯ, ನಟನೆಗಳ ಮೂಲಕ, ಮೂಡಿಬಂತು.
ವಾರ್ತಾ ಇಲಾಖೆ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಪ್ರದರ್ಶನಗೊಂಡ ಈ ರೂಪಕವು, ಜಾತಿಯ ಹೆಸರಿನಲ್ಲಿ ಪಂಚಮರ ಮೇಲೆ ಮೇಲ್ಜಾತಿಯವರು ನಡೆಸಿದ ಅಷ್ಟೂ ಕ್ರೌರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ರೀತಿಯಲ್ಲಿಅನಾವರಣಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
‘ಜಾತಿ ಮತದ ಗೋಡೆ ಒಡೆದು ವಿಶಾಲ ದೃಷ್ಟಿಯಿಂದ ಪ್ರಪಂಚವನ್ನು ನೋಡುವ ಕಣ್ಣುಗಳು ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಮನುಷ್ಯ–ಮನುಷ್ಯರ ನಡುವಿನ ಅವಿಶ್ವಾಸ, ಅಪನಂಬಿಕೆ ದೂರಮಾಡಬೇಕಾಗಿದೆ. ವೇದಿಕೆಯಲ್ಲಿ ನಿಂತು ಜಾತಿರಹಿತ ಸಮಾಜ ಬೇಕೆನ್ನುವ ನಾವು ಅದನ್ನು ಪಾಲಿಸುತ್ತಿಲ್ಲ. ಜನರ ನಡುವೆ ಪ್ರೀತಿ ವಿಶ್ವಾಸ ಹೆಚ್ಚಿಸುವ ಮೂಲಕ ಸುಂದರ ಸಮಾಜ ಕಟ್ಟಬೇಕಿದೆ’ ಎಂದು ಕಾರ್ಯಕ್ರಮಕ್ಕೆ ಮುನ್ನುಡಿ ಹಾಡಿದರು.
ಸುಮಾರು ಒಂದೂವರೆ ತಾಸು ನಡೆದ ‘ಮನುಷ್ಯ ಜಾತಿ ತಾನೊಂದೇ ವಲಂ’ ಮೇಳು ಕೀಳು ತೊರೆಯುವ ನದಿಯಂತೆ ವೇದಿಕೆಯಲ್ಲಿ ನಿರಂತರವಾಗಿ ಹರಿದುಬಂತು. ಜಾತಿಯ ಕೊಳೆ ತೊಳೆಯಲು ಯತ್ನಿಸಿದ ಬುದ್ಧ, ಬಸವಣ್ಣ, ಕನಕದಾಸರು, ಪುರಂದರ ದಾಸರು, ಸರ್ವಜ್ಞ, ಶಿಶುನಾಳ ಶರೀಫರು, ಗಾಂಧೀಜಿ, ಅಂಬೇಡ್ಕರ್ ಅವರಂತಹ ಮಹಾತ್ಮರು ಬೋಧಿಸಿದ ಸಮಾನತೆಯ ಸಿದ್ಧಾಂತಗಳ ಸಿಂಚನವನ್ನು ಈ ರೂಪಕ ಮಾಡಿತು.
ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 150 ಮಂದಿ ಯುವ ಕಲಾವಿದರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಶಾಸಕರಾದ ಜೆ.ಆರ್.ಲೋಬೊ, ಮೊಯಿದ್ದೀನ್ ಬಾವ, ಜಿಲ್ಲಾಧಿಕಾರಿ ಇಬ್ರಾಹಿಂ, ಕನ್ನಡ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಜಿಲ್ಲಾ ವಾರ್ತಾಧಿಕಾರಿ, ಖಾದರ್ ಶಾ, ತಾಂತ್ರಿಕ ನಿರ್ದೇಶಕ ಕೆ. ಶಿವರುದ್ರಯ್ಯ ಮತ್ತಿತರರಿದ್ದರು.ಬಿಳಿ ನಿಲುವಂಗಿ ಹೊದಿಸಿ ಗಣ್ಯರಿಗಾಗಿ ಕಾದಿರಿಸಿದ್ದ ಮುಂದಿನ ಎರಡು ಸಾಲಿನ ಕುರ್ಚಿಗಳು ಮಾತ್ರ ಕಾರ್ಯಕ್ರಮದ ಆಶಯವನ್ನು ಅಣಕಿಸುವಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.