ADVERTISEMENT

ಕೃಷಿ ಭೂಮಿಗೆ ಹಾನಿ-ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 9:30 IST
Last Updated 10 ಸೆಪ್ಟೆಂಬರ್ 2011, 9:30 IST

ಮೂಡುಬಿದಿರೆ: ಸಮೀಪದ ಕರಿಂಜೆ ಗ್ರಾಮದ ಮಾರಿಂಜಗುಡ್ಡೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಪುರಸಭೆ ನೆಲಸಮತಟ್ಟು ಮಾಡುವ ವೇಳೆ ಕೆಸರು ಮಣ್ಣು ಹತ್ತಿರದ ಕೃಷಿಭೂಮಿ, ಬಾವಿಗೆ ಹರಿದು ನಾಗರಿಕರಿಗೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶುಕ್ರವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

ಮಾರಿಂಜಗುಡ್ಡೆಯ ಎತ್ತರದ ಪ್ರದೇಶದಲ್ಲಿ ಪುರಸಭೆಯ ಪ್ರಸ್ತಾವಿತ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಜಾಗ ಸಮತಟ್ಟು ಮಾಡುವ ವೇಳೆ ಮಣ್ಣು ಮಳೆ ನೀರಿನೊಂದಿಗೆ ಕೃಷಿ ಭೂಮಿಗೆ ಹರಿದು ಬೆಳೆಗೆ ಹಾನಿಯಾಗಿದೆ. ಬಾವಿಯ ನೀರು ಕಲುಷಿತಗೊಂಡಿದೆ. ರಸ್ತೆಯಲ್ಲಿ ಕೆಸರುಮಣ್ಣು ತುಂಬಿ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
 
ಪುರಸಭೆ ಕಾಮಗಾರಿಗೆ ಮೊದಲೇ ಸಮಸ್ಯೆ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿದ್ದ ಕಾರಣ ಗ್ರಾಮಸ್ಥರಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಸ್ತಾವಿತ ಘನತ್ಯಾಜ್ಯ ನಿರ್ವಹಣಾ ಜಾಗ ಬಂಡೆಕಲ್ಲಿನಿಂದ ಕೂಡಿದ ಇಳಿಜಾರು ಪ್ರದೇಶವಾಗಿದೆ.

ಘನತ್ಯಾಜ್ಯ ಘಟಕ ಸ್ಥಾಪಿಸುವ ಮೊದಲು ತಾಂತ್ರಿಕ ತಜ್ಞರ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಭಿಪ್ರಾಯ ಪಡೆಯಬೇಕು ಎಂದು ಸ್ಥಳೀಯ ಪುರಸಭೆ ಸದಸ್ಯ ಕೃಷ್ಣರಾಜ ಹೆಗ್ಡೆ ಒತ್ತಾಯಿಸಿದರು.
ಕರಿಂಜೆ ಸತ್ಯನಾರಾಯಣಪುರ ಕ್ಷೇತ್ರದ ಮುಕ್ತಾನಂದ ಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸತೀಶ್ ಭಂಡಾರಿ, ಹರೀಶ್ ಶೆಟ್ಟಿ ಮಜಲೋಡಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.