ಸಿದ್ದಾಪುರ: ಸಮೀಪದ ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಕೆರೆ ಬಳಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಆ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಕೆರೆ ಅತಿಕ್ರಮಣ ಪ್ರದೇಶಕ್ಕೆ ಕುಂದಾಪುರ ತಹಶೀಲ್ದಾರ್ ಲಾಲಂಕಿ ರವಿ ಮತ್ತು ವಂಡ್ಸೆ ಕಂದಾಯ ನಿರೀಕ್ಷಕ ಶಂಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ ಆಕ್ರಮಿತ ಪ್ರದೇಶದಲ್ಲಿ ಕಟ್ಟಡ ತೆರವುಗೊಳಿಸಿ ಪುರಾತನ ಕೆರೆಯ ಉಳಿವಿಗಾಗಿ ಇದೇ 25ರಂದು ಹೊಸಂಗಡಿ ಬಂದ್‌ಗೆ ಗ್ರಾಮಸ್ಥರು ಕರೆ ನೀಡಿದ್ದಾರೆ.
ವಿವರ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.153 ರಲ್ಲಿ 15 ಎಕರೆ ಸರ್ಕಾರಿ ಜಾಗದಲ್ಲಿ ಅನಾದಿ ಕಾಲದಿಂದ ಕೋಟೆಕೆರೆಯಿದ್ದು, ಗ್ರಾಮದ ನೂರಾರು ರೈತರ ಕೃಷಿ ಚಟುವಟಿಕೆಗೆ ಪೂರಕವಾಗಿತ್ತು. ನಂತರದ ದಿನಗಳಲ್ಲಿ ಕೆರೆಯ ಹೂಳೆತ್ತದೆ ನೀರಿನ ಮಟ್ಟ ಕುಸಿದ ಕಾರಣ ಆ ಭಾಗದ ರೈತರು ಕೃಷಿ ಚಟುವಟಿಕೆಯಿಂದ ದೂರವಾಗಿದ್ದರು.
2010ರಲ್ಲಿ ಸ್ಥಳೀಯ ನಿವಾಸಿ ಅಮೀನಾಬಿ ಎಂಬುವರು ಕೆರೆ ಭಾಗವನ್ನು ಅತಿಕ್ರಮಿಸಿ ಶೆಡ್ ನಿರ್ಮಿಸಿದ್ದರು. ಈ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದಾಗ ಶೆಡ್ ತೆರವುಗೊಳಿಸುವಂತೆ ಗ್ರಾಪಂ ಅಮೀನಾಬಿ ಅವರಿಗೆ ನೋಟಿಸ್ ಜಾರಿ ಮಾಡಿತು. ದಾಖಲೆ ಹಾಜರು ಪಡಿಸುವಂತೆ ನೋಟೀಸ್ ಜಾರಿ ಮಾಡಿತ್ತು. ನಂತರ ಅವರು ಯಾವುದೇ ದಾಖಲೆಯನ್ನು ಗ್ರಾಮ ಪಂಚಾಯಿತಿಗೆ ಹಾಜರುಪಡಿಸಲಿಲ್ಲ.
ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಕೆರೆ ಅತಿಕ್ರಮಣ ತೆರವು ಮತ್ತು ಅಭಿವೃದ್ದಿಗೆ 1 ಕೋಟಿ ರೂಪಾಯಿ ಮಂಜೂರು ಮಾಡಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿತ್ತು.
ಕಳೆದ ಫೆಬ್ರವರಿ 22ರ ಸರ್ಕಾರದ ಸುತ್ತೋಲೆಯಂತೆ ಸರ್ಕಾರ ಪ್ರಮುಖ ಆಸ್ತಿಗಳಾದ ಕೆರೆ, ಸ್ಮಶಾನ, ಗೋಮಾಳಗಳ ಸಂರಕ್ಷಣೆ ಮತ್ತು ಅತಿಕ್ರಮಣ ತೆರವಿಗೆ ಗ್ರಾಮ ಪಂಚಾಯಿತಿಗೆ ನೋಟಿಸ್ ಜಾರಿ ಮಾಡಿತ್ತು.
ಅದರಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಅಮಾಸೆಬೈಲು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೆರೆ ಆಕ್ರಮಣ ತೆರವು ಕಾರ್ಯ ನಡೆಸುತ್ತಿದ್ದುದನ್ನು ಪ್ರತಿಭಟಿಸಿ ಅಮೀನಾಬಿ ಕುಂದಾಪುರ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕುಂದಾಪುರ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಹೊಸಂಗಡಿ ಗ್ರಾಮ ಪಂಚಾಯಿತಿ ಪಿಡಿಓಗೆ ನೋಟೀಸ್ ಜಾರಿ ಮಾಡಿದ್ದಾರೆ. ಅದರಲ್ಲಿ ಗ್ರಾಮ ಪಂಚಾಯಿತಿ 153 ಸರ್ವೆ ನಂ ರಲ್ಲಿ 15 ಎಕರೆ ಜಾಗಕ್ಕೆ ಹೊಂದಿಕೊಂಡಂತೆ 198.5 ರ ಅರಣ್ಯಭೂಮಿಯ 0.26 ಎಕರೆ ಪ್ರದೇಶದಲ್ಲಿ 1990ಕ್ಕಿಂತಲೂ ಹಿಂದೆ ಅತಿಕ್ರಮಣ ಮಾಡಿಕೊಂಡಿದ್ದಾರೆಂದು ವಂಡ್ಸೆ ಹೋಬಳಿ ಕಂದಾಯ ಅಧಿಕಾರಿಗಳ ವರದಿ ಬಂದಿದೆ.
ಸರ್ವೆ ನಂ 153ರಲ್ಲಿ ವಾಸಕ್ಕಾಗಿ ಕಟ್ಟಿದ ಕಟ್ಟಡ (ಪುರಾತನ ಕೆರೆ ಸರ್ವೆ ನಂ) ವನ್ನು ಜಿಲ್ಲಾಧಿಕಾರಿ ಆದೇಶ ಬರುವ ತನಕ ತೆರವು ಮಾಡಬಾರದೆಂದು ತಿಳಿಸಿದೆ. ಈ ಆದೇಶದಿಂದ ಅಮೀನಾಬಿ ಕುಟುಂಬದ ಅತಿಕ್ರಮಣ ಕಟ್ಟಡ ತೆರವು ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.
ತೆರವು ಕಾರ್ಯ: ಕೋಟೆಕೆರೆಯ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ 1 ಕೋಟಿ ಹಣ ಮಂಜೂರಾಗಿದ್ದು, ಸಣ್ಣನೀರಾವರಿ ಇಲಾಖೆ ಮೂಲಕ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಕೆರೆ ಜಾಗವನ್ನು ಇತ್ತೀಚಿಗೆ ಆಕ್ರಮಿತ ಕುಟುಂಬಗಳು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದು, ಅಮೀನಾಬಿ ಕುಟುಂಬವು ಈ ಹಿಂದೆ ಗ್ರಾ.ಪಂ. ಆಕ್ರಮಿತ ಶೆಡ್ ತೆರವುಗೊಳಿಸುವುದಾಗಿ ಲಿಖಿತವಾಗಿ ನೀಡಿ ಈಗ ಅಧಿಕಾರಿಗಳ ಮೊರೆ ಹೋಗಿದೆ. ಸರ್ಕಾರದ ಅದೇಶದ ಹಿನ್ನೆಲೆಯಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ತೆರವು ಕಾರ್ಯ ನಡೆಸಲಿದೆ ಎಂದು ಹೊಸಂಗಡಿ ಗ್ರಾ.ಪಂ ಉಪಾಧ್ಯಕ್ಷ ಬಾಲಚಂದ್ರ ಕುಲಾಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.