ADVERTISEMENT

ಕೇಡು ಬಗೆಯದ ಕ್ರೈಸ್ತರ ಮೇಲೆ ಏಕೆ ದಾಳಿ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:45 IST
Last Updated 21 ಫೆಬ್ರುವರಿ 2011, 8:45 IST

ಮಂಗಳೂರು:  ‘ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಕೇಡು ಬಗೆಯಲಿಲ್ಲ. ಆದರೂ ನಮ್ಮ ಮೇಲೆ ಏಕೆ ದ್ವೇಷ, ಅಸೂಯೆ? ಕ್ರೈಸ್ತರು ಹಿಂಸಾತ್ಮಕ ಮಾರ್ಗ ಹಿಡಿಯುವವರಲ್ಲ. ಏನಿದ್ದರೂ ಸೇವೆಯಲ್ಲಿ ತೊಡಗಿಕೊಳ್ಳುವವರು ಎಂಬುದನ್ನು ಸಮಾಜವೇ ಒಪ್ಪಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಕ್ರೈಸ್ತರನ್ನು ದಮನಿಸುವ ಪ್ರಯತ್ನ ಹೆಚ್ಚುತ್ತಿರುವುದು ಏಕೆ?’

ಚರ್ಚ್ ದಾಳಿಗೆ ಸಂಬಂಧಿಸಿ ನ್ಯಾ.ಸೋಮಶೇಖರ ಆಯೋಗದ ವರದಿ ವಿರೋಧಿಸಿ ಮಂಗಳೂರು ಧರ್ಮಪ್ರಾಂತ್ಯ ವಿವಿಧ ಜಾತ್ಯತೀತ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಇಲ್ಲಿನ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಂಗಳೂರಿನ ಬಿಷಪ್ ಫಾ.ಅಲೋಷಿಯಸ್ ಪಾವ್ಲ್ ಡಿಸೋಜ ಮುಂದಿಟ್ಟ ಪ್ರಶ್ನೆ ಇದು.

‘ದೇಶದಲ್ಲಿ ಕ್ರೈಸ್ತರ ಪ್ರಮಾಣ ಶೇ 2ರಷ್ಟು. ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಶೇ. 22ರಷ್ಟು. ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶಕ್ತಿ ಮೀರಿ ಸೇವೆ ಸಲ್ಲಿಸುತ್ತಿದ್ದೇವೆ. 2008ರ ಸೆ.14 ಮತ್ತು ಸೆ. 15ರಂದು 100ಕ್ಕೂ ಅಧಿಕ ಕ್ರೈಸ್ತ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ (ಆಯೋಗದ ಪ್ರಕಾರ 57) ನಡೆಸಿ ಧಾರ್ಮಿಕ ಭಾವನೆ ಘಾಸಿಗೊಳಿಸಲಾಯಿತು. ಈ ದಾಳಿ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ನಿಯೋಜಿಸಿದ ಆಯೋಗ ಯಾರು ಈ ದಾಳಿ ಮಾಡಲಿಲ್ಲ ಎಂಬುದನ್ನು ಮಾತ್ರ ಹೇಳಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಕ್ಷಕರೇ ಭಕ್ಷಕರಾದರು: ‘ಪಾಲಿಕೆ ಸದಸ್ಯೆ ಮರಿಯಮ್ಮ ಥಾಮಸ್ ಮಾತನಾಡಿ, ‘ಚರ್ಚ್ ದಾಳಿ ಆಘಾತ ತಂದಿತ್ತು. ನೊಂದವರಿಗೆ ಸಾಂತ್ವನ ನೀಡಬೇಕಾದ ಜಿಲ್ಲಾಡಳಿತವೇ ಕ್ರೈಸ್ತ ಸಮುದಾಯದ ಮೇಲೆ ದಾಳಿ ನಡೆಸಿತು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರನ್ನು ಪೊಲೀಸರು ವಿನಾಃಕಾರಣ ಜಾಮೀನುರಹಿತ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಿದರು. ಈಗ ಆಯೋಗದ ವರದಿ ಮತ್ತಷ್ಟು ನೋವು ತಂದಿದೆ’ ಎಂದರು.

‘15 ಚರ್ಚ್‌ಗಳ ಮೇಲೆ ಬಜರಂಗದಳವೇ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಆಯೋಗ ಮಧ್ಯಂತರ ವರದಿಯಲ್ಲಿ ಹೇಳಿತ್ತು. ಈ ಬಗ್ಗೆ ಗೃಹ ಸಚಿವರು ಚಕಾರ ಎತ್ತಿದ್ದರಿಂದ ಅಂತಿಮ ವರದಿಯಲ್ಲಿ ಆಯೋಗ ರಾಗ ಬದಲಿಸಿತು. ಆಯೋಗಕ್ಕಾಗಿ ರೂ 11 ಕೋಟಿ ಖರ್ಚು ಮಾಡಲಾಗಿದೆ. ಇಷ್ಟಾಗಿಯೂ ಆಯೋಗ ಯಾವುದೇ ಸ್ಪಷ್ಟ ನಿರ್ಣಯಕ್ಕೆ ಬಂದಿಲ್ಲ’ ಎಂದರು.

ಕರ್ನಾಟಕ ಮಿಷನ್ ನೆಟ್‌ವರ್ಕ್ ಅಧ್ಯಕ್ಷ ವಾಲ್ಟರ್ ಮಾಬೆನ್ ಮಾತನಾಡಿ, ‘ಕೇಸರಿ ಪಡೆಯ ಭಯೋತ್ಪಾದಕ ದಾಳಿಯಿಂದ ಕ್ರೈಸ್ತ ಸಮುದಾಯ ನಡುಗಿ ಹೋಗಿತ್ತು. ಈ ದಾಳಿ ವಿರುದ್ಧ ಜಾತ್ಯತೀತ ಸಂಘಟನೆಗಳು ಜಾತಿ ಮತಭೇದ ಮರೆತು ಪ್ರತಿಭಟಿಸಿದವು. ಮಾನವ ಹಕ್ಕು ಆಯೋಗ, ಜನಪರ ಸಂಘಟನೆಗಳು ಈ ದಾಳಿಯಲ್ಲಿ ಸಂಘ ಪರಿವಾರದ ಪಾತ್ರವನ್ನು, ಸರ್ಕಾರದ ಕೃಪಾಕಟಾಕ್ಷದಿಂದಲೇ ದಾಳಿ ನಡೆದಿದೆ ಎಂಬುದನ್ನು ಸಾಕ್ಷ್ಯಾಧಾರ ಸಹಿತ ಧೃಡೀಕರಿಸಿದ್ದರು’ ಎಂದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಸ್ವಲ್ಪ ಕಾಲ ತಪ್ಪಿಸಿಕೊಂಡರೆ ಸಾಕು ಎಂಬ ಕಾರಣಕ್ಕೆ ಸರ್ಕಾರ ತನಿಖೆಯನ್ನು ನ್ಯಾ.ಸೋಮಶೇಖರ ಆಯೋಗಕ್ಕೆ ಒಪ್ಪಿಸಿತು. ವಿಚಾರಣೆ ವೇಳೆ ಹಿಂದೂಪರ ವಕೀಲರು ಕ್ರೈಸ್ತ ಸಾಕ್ಷಿಗಳಿಗೆ ಕುಚೋದ್ಯದ ಪ್ರಶ್ನೆಗಳ ಮೂಲಕ ಮತ್ತಷ್ಟು ಅವಮಾನ ಮಾಡಿ ಅಮಾನುಷವಾಗಿ ವರ್ತಿಸಿದರು. ದಾಳಿ ಮಾಡಿದವರನ್ನು ಗುರುತಿಸಬೇಕಾದ ಆಯೋಗ ಸಂಘ ಪರಿವಾರ ನಿರ್ದೋಷಿ ಎಂದು ಅಭಿಪ್ರಾಯಪಟ್ಟಿದೆ. ಸರ್ಕಾರ ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಿರುವ ಬಗ್ಗೆ ಸಂಶಯವಿದೆ’ ಎಂದು ಅವರು ಆರೋಪಿಸಿದರು.

‘ದಾಳಿಗೆ 30 ವರ್ಷ ಹಿಂದೆ ಪ್ರಕಟವಾದ ಸತ್ಯದರ್ಶಿನಿ ಪುಸ್ತಕವನ್ನು ನ್ಯೂಲೈಫ್ ಸಭೆಯವರು ಹಂಚಿದ್ದು ಕಾರಣ ಎಂದು ಕೆಲವು ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಈ ಪುಸ್ತಕದ ಪ್ರತಿ ಒದಗಿಸುವಂತೆ ಆಯೋಗ ಕೋರಿ ಎರಡು ವರ್ಷವಾದರೂ ಅದರ ಪ್ರತಿ ಸಿಕ್ಕಿಲ್ಲ. ಆಯೋಗಕ್ಕೆ ಸಿಕ್ಕಿದ್ದೂ ಎರಡು ಛಾಯಾಪ್ರತಿಗಳು ಮಾತ್ರ. ಇದರ ಪ್ರತಿ ಪಡೆಯಲು ರೂ 11 ಕೋಟಿ ಸಾಕಾಗಲಿಲ್ಲವೇ?’ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು. ಕರಾವಳಿಯ 45ಕ್ಕೂ ಅಧಿಕ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.