ADVERTISEMENT

ಕೊಲೆ ಆರೋಪಿಗಳು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ

ವಿ.ಎಸ್.ಸುಬ್ರಹ್ಮಣ್ಯ
Published 9 ಮೇ 2018, 10:52 IST
Last Updated 9 ಮೇ 2018, 10:52 IST
ಬಿ.ರಮಾನಾಥ ರೈ
ಬಿ.ರಮಾನಾಥ ರೈ   

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎಂಟನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರು ಬಾರಿ ಇಲ್ಲಿ ಗೆಲುವಿನ ಸವಿ ಅನುಭವಿಸಿದವರು. ಈಗ ಏಳನೇ ಗೆಲುವಿಗೆ ಹಣಾಹಣಿ ನಡೆಸುತ್ತಿದ್ದಾರೆ.

ಐದು ವರ್ಷಗಳ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಸವಾಲುಗಳನ್ನು ಎದುರಿಸಿದವರು. ಜಿಲ್ಲೆಯಲ್ಲಿನ ರಾಜಕೀಯ ಬೆಳವಣಿಗೆಗಳು, ಚುನಾವಣಾ ಕಣದಲ್ಲಿನ ಪರಿಸ್ಥಿತಿ, ದಕ್ಷಿಣ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಕನಸುಗಳ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಮತೀಯವಾದಿಗಳನ್ನು ಬೆಂಬಲಿಸುತ್ತದೆ ಎಂಬ ಬಿಜೆಪಿಯ ಆರೋಪದಲ್ಲಿ ಹುರುಳಿದೆಯೇ?

ADVERTISEMENT

ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು, ನಾವೂರು ಹರೀಶ್ ಪೂಜಾರಿಯನ್ನು ಕೊಲೆ ಮಾಡಿದವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಯಾವ ಭಯವೂ ಇಲ್ಲ. ಈಗಲೂ ನಾವು ಧೈರ್ಯವಾಗಿ ಹೇಳುತ್ತೇವೆ. ಹಿಂದೂ ಇರಲಿ ಅಥವಾ ಮುಸ್ಲಿಂ ಇರಲಿ ಯಾವುದೇ ಮತೀಯವಾದವನ್ನೂ ನಾವು ಬೆಂಬಲಿಸುವುದಿಲ್ಲ.

ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲಿದೆಯೇ?

ಕಳೆದ ಚುನಾವಣೆಯಲ್ಲಿ ಎಂಟಕ್ಕೆ ಏಳು ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈ ಬಾರಿ ಎಲ್ಲ ಎಂಟು ಸ್ಥಾನಗಳು ಕಾಂಗ್ರೆಸ್‌ ವಶವಾಗಲಿವೆ. ಮೇ 15ರಂದು ಇದು ತಿಳಿಯುತ್ತದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಪ್ರವಾಸ ಮತ ಗಳಿಕೆಗೆ ನೆರವಾಗುತ್ತಾ?

ಖಂಡಿತವಾಗಿಯೂ ರಾಹುಲ್‌ ಅವರ ಭೇಟಿಯಿಂದ ಪಕ್ಷಕ್ಕೆ ಬಲ ಬಂದಿದೆ. ಅವರು ಬಂಟ್ವಾಳದಲ್ಲಿ ಸಭೆ ನಡೆಸಿದ್ದು ಮಧ್ಯಾಹ್ನ. ಬಂಟ್ವಾಳದ ಇತಿಹಾಸದಲ್ಲಿ ಮಧ್ಯಾಹ್ನ ನಡೆದ ಸಭೆಗೆ ಯಾವತ್ತೂ ಅಷ್ಟು ಜನ ಸೇರಿರಲಿಲ್ಲ. ಇದು ಜನಬೆಂಬಲ ಹೆಚ್ಚುತ್ತಿರುವ ಸಂಕೇತ.

ನರೇಂದ್ರ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗಿಲ್ಲವೇ?

ಮೋದಿ, ಅಮಿತ್‌ ಶಾ, ಯೋಗಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ಬಿಜೆಪಿಯ ಬಗ್ಗೆ ಜಿಲ್ಲೆಯ ಜನರಿಗೆ ಒಲವು ಮತ್ತಷ್ಟು ಕಡಿಮೆಯಾಗಿದೆ. ಹಿಂದಿನ ಚುನಾವಣೆಗಿಂತಲೂ ಹೀನಾಯ ಸ್ಥಿತಿಗೆ ಬಿಜೆಪಿ ಕುಸಿಯಲಿದೆ. ಅದಕ್ಕೆ ಈ ಮೂವರು ತಾರಾ ಪ್ರಚಾರಕರ ಕೊಡುಗೆಯೂ ಕಾರಣವಾಗಲಿದೆ.

ಬಂಟ್ವಾಳದಲ್ಲಿ ಎಸ್‌ಡಿಪಿಐ ಸ್ಪರ್ಧೆಯಿಂದ ಹಿಂದೆ ಸರಿದಿರುವುದರ ಹಿಂದಿನ ರಹಸ್ಯ ಏನು?

ಅದನ್ನು ಆ ಪಕ್ಷದವರೇ ಹೇಳಬೇಕು. ನಾನು ಯಾರಲ್ಲೂ ಮನವಿ ಮಾಡಿರಲಿಲ್ಲ. ಅವರಾಗಿಯೇ ನಾಮಪತ್ರ ಹಿಂದಕ್ಕೆ ಪಡೆದರು. ಅದಕ್ಕೆ ನಾನು ಹೇಗೆ ಉತ್ತರದಾಯಿಯಾಗಲು ಸಾಧ್ಯ. ಪ್ರಾಮಾಣಿಕವಾಗಿ ಹೇಳುತ್ತೇನೆ ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ.

ಎತ್ತಿನಹೊಳೆ ಯೋಜನೆ ವಿಚಾರ ಕಾಂಗ್ರೆಸ್‌ಗೆ ಅಡ್ಡಿ ಮಾಡುವುದಿಲ್ಲವೇ?

ಎತ್ತಿನಹೊಳೆ ಯೋಜನೆ ರೂಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರ. ಈಗ ಬಿಜೆಪಿ, ಜೆಡಿಎಸ್‌ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿ ಆ ವಿಚಾರ ಇದೆ. ಜಿಲ್ಲೆಗೆ ಅನುಕೂಲವಾಗುವ ಪಶ್ಚಿಮ ವಾಹಿನಿ ಯೋಜನೆ ರೂಪಿಸಿದ್ದು ಕಾಂಗ್ರೆಸ್‌ ಸರ್ಕಾರ. ಇದೆಲ್ಲವೂ ಸ್ಪಷ್ಟವಾಗಿ ಜನರಿಗೆ ತಿಳಿದಿದ್ದು, ಅದರಿಂದ ತೊಂದರೆ ಆಗುವುದಿಲ್ಲ.

ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ತ್ವರಿತವಾಗಿ ಪೂರ್ಣಗೊಳ್ಳಬೇಕು. ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವಂತಹ ಕೆಲವು ಯೋಜನೆಗಳನ್ನು ಆರಂಭಿಸುವುದು ನನ್ನ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.