ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುಕ್ಕಾಜೆ ನಿವಾಸಿಯಾದ ಗೃಹಿಣಿಯೊಬ್ಬರಿಗೆ ಆಕೆಯ ಪತಿ ಮತ್ತು ಮನೆಯವರು ಸೇರಿಕೊಂಡು ಹೆಚ್ಚು ವರದಕ್ಷಿಣೆಗಾಗಿ ಪೀಡಿಸಿ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದು, ಈ ಕುರಿತು ಮಹಿಳೆ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.
ಪಡುವನ್ನೂರು ಗ್ರಾಮದ ಕುಕ್ಕಾಜೆ ನಿವಾಸಿ ಅಸ್ಮಾ ಕೆ.ಎಚ್. ಅವರು ಹಿಂಸೆಗೊಳಗಾದ ಮಹಿಳೆ. ತನ್ನ ಪತಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಕಲ್ಲರ್ಟಿಪದಿ ನಿವಾಸಿ ಅಬ್ದುಲ್ ಬಶೀರ್, ಆತನ ತಂದೆ ಮಹಮ್ಮದ್ ಕೆ, ತಾಯಿ ನೆಬಿಸಾ ಮತ್ತು ಸಹೋದರಿ ಖದೀಜಾ ಅವರು ಸೇರಿಕೊಂಡು ಹೆಚ್ಚು ವರದಕ್ಷಿಣೆ ತರಲು ಪೀಡಿಸಿ ಹಿಂಸೆ ನೀಡಿದ್ದಲ್ಲದೆ, ಕಳೆದ ಶನಿವಾರ ಮಾರಣಾಂತಿಕ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
7 ವರ್ಷಗಳ ಹಿಂದೆ ತನ್ನ ವಿವಾಹವು ಕಲ್ಲರ್ಟಿಪದಿಯ ಅಬ್ದುಲ್ ಬಶೀರ್ ಜೊತೆ ನಡೆದಿದ್ದು, ವಿವಾಹದ ಸಂದರ್ಭದಲ್ಲಿ ತನ್ನ ತಂದೆ 60 ಪವನ್ ಚಿನ್ನಾಭರಣ ಮತ್ತು ರೂ 2 ಲಕ್ಷ ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ ವಿವಾಹದ ಬಳಿಕ ಆರೋಪಿಗಳು ಹೆಚ್ಚು ವರದಕ್ಷಿಣೆಗಾಗಿ ಪೀಡಿಸುತ್ತಾ ಹಿಂಸೆ ನೀಡಲಾರಂಭಿಸಿದರು. ಈ ವಿಚಾರದಲ್ಲಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೆ ಇದೀಗ ಆರೋಪಿಗಳು ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ತನಗೆ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದು, ಪತಿಯೊಂದಿಗೆ ಬಾಳ್ವೆ ನಡೆಸಲು ಅಸಾಧ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಜೊತೆಗೆ ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಹಲ್ಲೆಗೊಳಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೂ ಈ ಕುರಿತು ದೂರು ನೀಡಿದ್ದಾರೆ.
ಪ್ರಕರಣ ತಿರುಚುವ ಯತ್ನ- ಆರೋಪ: ಅಸ್ಮಾ ಅವರು ಪತಿ ಮತ್ತು ಆತನ ಮನೆಯವರಿಂದ ನಿರಂತರ ಹಿಂಸೆಗೊಳಗಾದ ಕುರಿತು ಕೂರ ತಂಙಳ್ ಅವರಿಗೆ ನಾವೇ ದೂರು ನೀಡಿದ್ದೆವು. ಅವರು ಇತ್ತಂಡದವರನ್ನು ಕರೆದು ಮಾತುಕತೆ ನಡೆಸಿದ್ದರು. ಆ ವೇಳೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದ ಅಬ್ದುಲ್ ಬಶೀರ್ ಆ ಬಳಿಕ ತನ್ನ ತಂದೆ ,ತಾಯಿ ಮತ್ತು ಸಹೋದರಿಯ ಜೊತೆಗೆ ಸೇರಿಕೊಂಡು ಮತ್ತೆ ಹಿಂಸೆ ನೀಡಲಾರಂಭಿಸಿದ್ದ. ಆ ಬಳಿಕ ಹಿರಿಯರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯ ವೇಳೆ ಪತ್ನಿಯೊಂದಿಗೆ ಚೆನ್ನಾಗಿ ಬಾಳುವುದಾಗಿ ಕರಾರು ಪತ್ರ ಮಾಡಲಾಗಿತ್ತು. ಅದಕ್ಕೂ ಈಗ ಬೆಲೆ ಇಲ್ಲದಾಗಿದೆ ಎಂದು ಅಸ್ಮಾ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ವಿವಾಹದ ಸಂದರ್ಭದಲ್ಲಿ ಅಸ್ಮಾ ಹೆತ್ತವರು ನೀಡಿದ್ದ 60 ಪವನ್ ಚಿನಾಭರಣದಲ್ಲಿ ಬಹುತೇಕ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಅಬ್ದುಲ್ ಬಶೀರ್ ಉಳಿದ ಚಿನ್ನಾಭರಣವನ್ನು ಅಡವಿಟ್ಟಿದ್ದಾನೆ. ವಿವಾಹದ ಸಂದರ್ಭದಲ್ಲಿ ನೀಡಲಾಗಿದ್ದ ಹಣವನ್ನು ಕೂಡ ಖರ್ಚು ಮಾಡಿ ಇದೀಗ ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಿರುವ ಅವರು ಇದೀಗ ಆರೋಪಿಯು ತಲಾಕ್ ಪತ್ರ ಕಳುಹಿಸಿಕೊಟ್ಟಿರುವುದಾಗಿ ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾನೆಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.